ಕರಾವಳಿರಾಜಕೀಯ

ಪುತ್ತೂರು: ಶ್ರದ್ದಾಂಜಲಿ ಬ್ಯಾನರ್ ಪ್ರಕರಣ- ಬಿಜೆಪಿ ತನ್ನ ದ್ವಿಪಾತ್ರ ಅಭಿನಯ ನಾಟಕ ನಿಲ್ಲಿಸಲಿ: ಎಸ್‌ಡಿಪಿಐ

ಪುತ್ತೂರು: ನಳಿನ್ ಕುಮಾರ್ ಕಟೀಲ್ ಮತ್ತು ಡಿವಿ ಸದಾನಂದ ಗೌಡರಿಗೆ ವ್ಯಂಗ್ಯ ರೂಪದಲ್ಲಿ ಶ್ರಧ್ದಾಂಜಲಿ ಬ್ಯಾನರ್ ಹಾಕಿದ ಹಿಂದುತ್ವ ಕಾರ್ಯಕರ್ತರ ಬಂಧಿಸಿ ಪೋಲಿಸ್ ದೌರ್ಜನ್ಯ ನಡೆಸಲಾಗಿದೆ ಎಂಬ ವಿಚಾರದಲ್ಲಿ ಬಿಜೆಪಿ ನಾಯಕರು ದ್ವಿಪಾತ್ರ ಅಭಿನಯ ನಾಟಕ ನಿಲ್ಲಿಸಲಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಹೇಳಿದ್ದಾರೆ.

‌ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಪುತ್ತೂರಿನಲ್ಲಿ ಬಿಜೆಪಿಯು ಮನೆಯೊಂದು ಮೂರು ಬಾಗಿಲು ಎಂಬ ರೀತಿಯಲ್ಲಿ ಇದೆ.
ಸಂಘಪರಿವಾರ ನಾಯಕರು ಹಿಂದುತ್ವ ಸಿದ್ದಾಂತದಲ್ಲಿ ರಾಜಕೀಯ ಮಾಡಿ ಆ ಮೂಲಕ ಜನರನ್ನು ಜಾತಿ ಆಧಾರಿತವಾಗಿ ಪರಸ್ಪರ ಎತ್ತಿ ಕಟ್ಟಿ ಅಧಿಕಾರ ಪಡೆಯುವ ಹುನ್ನಾರದಿಂದ ಅಮಾಯಕ ಹಿಂದು ಯುವಕರ ತಲೆಯಲ್ಲಿ ಜಾತಿ ದ್ವೇಷವನ್ನು ತುಂಬಿ ತಮ್ಮ ಕಾರ್ಯ ಸಾಧಿಸಲು ಅನೇಕ ವರ್ಷಗಳಿಂದ ಸಮಾಜದ ಸ್ವಾಸ್ಥ್ಯ ನಶಿಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ.
ಇದರ ಪರಿಣಾಮವಾಗಿ ಇಂತಹ ಕಾರ್ಯಕರ್ತರ ದೇಹದಲ್ಲಿ ಕೋಮು ದ್ವೇಷ ತುಂಬಿ ಬಿಜೆಪಿಯ ಹಿಂದುತ್ವದ ಅಮಲು ಸಾಕಾಗದೆ ರೊಚ್ಚಿಗೆದ್ದುದರ ಪರಿಣಾಮ ಪುತ್ತೂರಿನಲ್ಲಿ ಹಿಂದುತ್ವದ ಪುತ್ತಿಲ ಪಕ್ಷೇತರವಾಗಿ ನಿಲ್ಲುವ ಪ್ರಮೇಯ ಬಂದೊದಗಿರುವುದು ಎಂದು ಅವರು ತಿಳಿಸಿದ್ದಾರೆ

ಇದೆಲ್ಲದರ ಪರಿಣಾಮವಾಗಿ ನಳಿನ್ ಕುಮಾರ್ ಕಟೀಲ್ ಮತ್ತು ಸದಾನಂದ ಗೌಡರ ಚಿತ್ರ ಹಾಕಿ ಶ್ರಧ್ದಾಂಜಲಿ ಬ್ಯಾನರ್ ಹಾಕುವ ತನಕ ಬಂದಿದೆ. ನಂತರ ಪುತ್ತೂರಿ‌ನ ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಹಿಂದು ಕಾರ್ಯಕರ್ತರ ವಿರುದ್ಧ ಘೋಷಣೆ ಕೂಗಿ ಬಿಜೆಪಿ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದಲ್ಲದೇ ಬಿಜೆಪಿ ನಾಯಕರೇ ಪೋಲಿಸ್ ಇಲಾಖೆಗೂ ಒತ್ತಡ ಹೇರಿದ್ದರು. ನಂತರ ಆರೋಪಿಗಳ ಬಂಧನವಾಗಿ ಡಿವೈಸ್‌ಪಿ ಕಛೇರಿಯಲ್ಲಿ ಆರೋಪಿಗಳಿಗೆ ದೌರ್ಜನ್ಯ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು ಆರೋಪಿಗಳು ಆಸ್ಪತ್ರೆಯಲ್ಲಿ ದಾಖಲಾಗಿ ಪೋಲೀಸರ ವಿರುದ್ಧ ದೌರ್ಜನ್ಯದ ಬಗ್ಗೆ ಆರೋಪ ಮಾಡಿದ್ದಾರೆ.
ನಂತರ ಘಟನೆ ತೀವ್ರ ಸ್ವರೂಪ ಪಡೆದಾಗ ದ್ವೇಷ ಕಲ್ಲಡ್ಕ ಪ್ರಭಾಕರ್ ಭಟ್, ಚಕ್ರವರ್ತಿ ಸೂಲಿಬೆಲೆ, ಬಸನ ಗೌಡ ಯತ್ನಾಲ್ ಸೇರಿದಂತೆ ಬಿಜೆಪಿ ಮತ್ತು ಸಂಘಪರಿವಾರದ ದೊಡ್ಡ ನಾಯಕರೇ ಸಾಂತ್ವನ ಹೇಳುವ ನೆಪದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ರಾಜಕೀಯ ಮಾಡಲು ನೋಡಿದೆಲ್ಲವೂ ಜಿಲ್ಲೆಯ ಜನತೆ ಅರ್ಥ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬ್ಯಾನರ್ ಹಾಕಿದ್ದು ಬಿಜೆಪಿ ಕಾರ್ಯಕರ್ತರು,
ಆರೋಪಿಗಳಿಗೆ ದೌರ್ಜನ್ಯ ನಡೆಸಲು ಒತ್ತಡ ಹೇರಿದ್ದು ಬಿಜೆಪಿ ನಾಯಕರೇ ಎಂಬುದು ಸ್ವತಃ ಬಿಜೆಪಿ ಕಾರ್ಯಕರ್ತರಿಗೂ ಮತ್ತು ಜಿಲ್ಲೆಯ ಜನತೆಗೂ ತಿಳಿದಿದೆ.
ಈ ಪ್ರಕರಣದಲ್ಲಿ ಬಿಜೆಪಿ ದ್ವಿಪಾತ್ರ ಅಭಿನಯ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಹಾಗಾಗಿ ಜಿಲ್ಲೆಯ ಜನತೆ ಬಿಜೆಪಿಯ ಇಂತಹ ನಾಟಕಕ್ಕೆ ಬಲಿಪಶುವಾಗದೆ ಬಿಜೆಪಿ ಸಂಘಪರಿವಾರದ ಹಿಂದುತ್ವ ಸಿದ್ದಾಂತಕ್ಕೆ ಬಲಿಯಾಗದೇ ಜಾತಿ ಮತ ಬೇದ ಮೆರೆತು ನೈಜ ಜಾತ್ಯಾತೀತ ಪ್ರಜಾಪ್ರಭುತ್ವ ರಾಷ್ಟ್ರವನ್ನು ನಿರ್ಮಿಸಲು ಪಣತೊಡಬೇಕು ಎಂದು ಇಬ್ರಾಹಿಂ ಸಾಗರ್ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!