ಕರಾವಳಿರಾಜಕೀಯ

ಪುತ್ತೂರು ಜೆಡಿಎಸ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ: ಗಣನೀಯ ಮತ ಪಡೆಯುವ ಸಾಧ್ಯತೆ



ಪುತ್ತೂರು: ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಕಲ್ಲೇಗ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದು ಇದೀಗ ಸದ್ದಿಲ್ಲದೇ ತಮ್ಮ ಪ್ರಚಾರ ಕಾರ್ಯವನ್ನೂ ಆರಂಭಿಸಿರುವುದಾಗಿ ತಿಳಿದು ಬಂದಿದೆ.



ಕಳೆದ 30 ವರ್ಷಗಳಿಂದ ಜೆಡಿಎಸ್‌ನಲ್ಲಿ ಗುರುತಿಸಿಕೊಂಡು ಪಕ್ಷ ಸಂಘಟಿಸುತ್ತಿರುವ ಅಶ್ರಫ್ ಕಲ್ಲೇಗ ಅವರು ಹಲವು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದರೂ ಪಕ್ಷದ ಹಿತದೃಷ್ಟಿಯಿಂದ ಕೊನೆಯ ಕ್ಷಣದಲ್ಲಿ ನಾಯಕರ ಮಾತಿಗೆ ಬೆಲೆ ಕೊಟ್ಟು ಇತರ ಅಭ್ಯರ್ಥಿಗಳಿಗೆ ಅವಕಾಶ ನೀಡಿ ಅವರ ಪರವಾಗಿ ಕೆಲಸ ಮಾಡಿಕೊಂಡು ಬಂದಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅಶ್ರಫ್ ಕಲ್ಲೇಗ ಅವರ ಹೆಸರು ಪುತ್ತೂರು ಕ್ಷೇತ್ರದಿಂದ ಹೈಕಮಾಂಡ್‌ಗೆ ರವಾನೆಯಾಗಿ ಅಶ್ರಫ್ ಕಲ್ಲೇಗರಿಗೆ ಅವಕಾಶ ಸಿಗುವ ಎಲ್ಲ ಸಾಧ್ಯತೆಗಳಿತ್ತು. ಆದರೆ ಇತ್ತೀಚೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ದಿವ್ಯಪ್ರಭಾ ಅವರಿಗೆ ಜೆಡಿಎಸ್ ಪುತ್ತೂರು ಕ್ಷೇತ್ರದ ಟಿಕೆಟ್ ನೀಡಿದ್ದು ಇದರಿಂದ ಅಸಮಾಧಾನಗೊಂಡ ಅಶ್ರಫ್ ಕಲ್ಲೇಗ ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದಾರೆ.

ಅಶ್ರಫ್ ಕಲ್ಲೇಗ ಅವರು 16 ವರ್ಷಗಳಿಂದ ಮುಸ್ಲಿಂ ಯುವಜನ ಪರಿಷತ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಪುತ್ತೂರು ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಮುಸ್ಲಿಂ ಸಮುದಾಯದ ವಿರುದ್ಧ ಅನ್ಯಾಯ ನಡೆದ ಸಂದರ್ಭದಲ್ಲಿ ಅದರ ವಿರುದ್ಧ ಪ್ರತಿಭಟಿಸಲು ಮತ್ತು ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಿಕೊಡಲು ಪ್ರಯತ್ನಸಿದ್ದಾರೆ. ಎಲ್ಲ ಜಾತಿ, ಧರ್ಮದವರೊಂದಿಗೂ ಆತ್ಮೀಯ ಒಡನಾಟ ಇಟ್ಟುಕೊಂಡಿರುವ ಇವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಈಗಾಗಲೇ ಮುಸ್ಲಿಂ ಸಮುದಾಯದ ಅನೇಕ ನಾಯಕರ ಜೊತೆ ಮಾತುಕತೆ ನಡೆಸಿರುವ ಅಶ್ರಫ್ ಕಲ್ಲೇಗ ಅವರಿಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ ಎನ್ನಲಾಗಿದ್ದು ಚುನಾವಣೆಯಲ್ಲಿ ಸ್ಪರ್ಧಿಸಲು ಹಲವು ನಾಯಕರು ತಮ್ಮ ಬೆಂಬಲ ಘೋಷಿಸಿರುವುದಾಗಿ ತಿಳಿದು ಬಂದಿದೆ.

ಅಶ್ರಫ್ ಕಲ್ಲೇಗ ಅವರು ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿದ್ದು ಇತರ ಸಮುದಾಯದ ಮತಗಳೂ ಅವರಿಗಿದೆ. ಹಾಗಾಗಿ ಅವರು ಗಣನೀಯ ಮತ ಪಡೆಯುವುದರಲ್ಲಿ ಅನುಮಾನವಿಲ್ಲ ಎನ್ನುವ ಮಾತುಗಳು ಪುತ್ತೂರು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಅಶ್ರಫ್ ಕಲ್ಲೇಗರ ಸ್ಪರ್ಧೆ ಇದೀಗ ಜಾತ್ಯಾತೀತ ಪಕ್ಷಗಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

ನಾಮ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅಶ್ರಫ್ ಕಲ್ಲೇಗ ಅವರು ನಾನು ನಾಮಪತ್ರ ಸಲ್ಲಿಸಿದ್ದು ಅದನ್ನು ಹಿಂದಕ್ಕೆ ಪಡೆಯುವುದಿಲ್ಲ. ನನ್ನ ಸಾಮರ್ಥ್ಯ ಏನೆಂಬುವುದುನ್ನು ನಾನು ತೋರಿಸಿಕೊಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!