ಮನವೊಲಿಕೆ, ಒತ್ತಡಗಳಿಗೆ ಜಗ್ಗದ ಪುತ್ತಿಲರನ್ನು ಹಿಂದುತ್ವದ ಮೂಲಕವೇ ಕಟ್ಟಿ ಹಾಕಲು ಗೇಮ್ ಪ್ಲಾನ್?
ಪುತ್ತಿಲ ಕಣದಿಂದ ಹಿಂದೆ ಸರಿದರೆ ಯಾರಿಗೆ ಲಾಭ..? ಯಾರಿಗೆ ನಷ್ಟ..?
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿರುವ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಸ್ಪರ್ಧೆ ಬಹುತೇಕ ಖಚಿತ ಎನ್ನಲಾಗುತ್ತಿದ್ದು ಇದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ಇದೀಗ ಪುತ್ತಿಲ ಅವರನ್ನು ಕಟ್ಟಿ ಹಾಕಲು ಬಿಜೆಪಿ ಸಂಘಪರಿವಾರ ಮಾಸ್ಟರ್ ಪ್ಲಾನ್ ರೂಪಿಸುತ್ತಿರುವುದಾಗಿ ತಿಳಿದು ಬಂದಿದೆ.
ಪುತ್ತಿಲ ಅವರನ್ನು ಕಣದಿಂದ ವಾಪಸ್ ಸರಿಯುವಂತೆ ಸಂಘ ಪರಿವಾರ ಸಂಘಟನೆಗಳೇ ಪ್ರಯತ್ನ ನಡೆಸಿದ್ದರು ಕೂಡಾ ಪುತ್ತಿಲ ಅವರು ಹಿಂದೆ ಸರಿಯಲು ಹಿಂದೇಟು ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಅರುಣ್ ಕುಮಾರ್ ಪುತ್ತಿಲ ಅವರನ್ನು ಸ್ಪರ್ಧೆಯಿಂದ ಹಿಂದೆ ಸರಿಸಲು ಸಾಧ್ಯವಾಗದಿದ್ದರೂ ಅವರ ಜೊತೆಗಿರುವ ಕಾರ್ಯಕರ್ತರನ್ನಾದರೂ ಬಿಜೆಪಿ ಅಭ್ಯರ್ಥಿ ಪರವಾಗಿ ಬೆಂಬಲಿಸವಂತೆ ಮಾಡಲು ಕೂಡಾ ಪ್ಲಾನ್ ರೂಪಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಬೆಂಕಿ ಭಾಷಣಗಾರ ಖ್ಯಾತಿಯ ಜಗದೀಶ್ ಕಾರಂತ ಅವರನ್ನು ಪುತ್ತೂರಿಗೆ ಕರೆ ತಂದು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಪರ ಪ್ರಚಾರ ನಡೆಸಿ ಪುತ್ತಿಲ ಮತ್ತು ತಂಡದ ಅಬ್ಬರವನ್ನು ವೀಕ್ ಮಾಡಲು ಚರ್ಚೆ ನಡೆದಿದೆ ಎನ್ನಲಾಗಿದ್ದು ಒಟ್ಟಾರೆಯಾಗಿ ಪುತ್ತಿಲರಿಗೆ ಒತ್ತಡ ಹೇರಿ ಅವರನ್ನು ಕಣದಿಂದ ವಾಪಸ್ ಆಗುವಂತೆ ಮಾಡಲು ಏನು ಮಾಡಬೇಕೋ ಅವೆಲ್ಲವನ್ನೂ ಸಂಘ ಪರಿವಾರ ಸಂಘಟನೆಗಳು ಮಾಡುತ್ತಿದೆ ಎನ್ನಲಾಗಿದೆ.
ಪುತ್ತಿಲ ಕಣದಲ್ಲಿರುವುದು ಬಿಜೆಪಿಗೆ ನಷ್ಟ ಎನ್ನುವ ಲೆಕ್ಕಾಚಾರ ಒಂದೆಡೆ ನಡೆಯುತ್ತಿದ್ದರೆ ಹಿಂದುತ್ವದ ಆಧಾರದಲ್ಲಿ ಟಿಕೆಟ್ ನೀಡದೆ ಜಾತಿಯ ಆಧಾರದಲ್ಲಿ ಟಿಕೆಟ್ ನೀಡುವವರಿಗೆ ಬುದ್ದಿ ಕಲಿಸಿಯೇ ತೀರುತ್ತೇವೆ ಎನ್ನುವ ಹಠ ಪುತ್ತಿಲ ಅಭಿಮಾನಿಗಳದ್ದು. ಪುತ್ತಿಲ ಪರವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದ್ದು ಬಿಜೆಪಿಯ ಅಭ್ಯರ್ಥಿಗೆ ಮತ ಯಾಚಿಸಿ ಯಾರಾದರೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಲ್ಲಿ ಅಲ್ಲಿಯೂ ಪುತ್ತಿಲ ಅಭಿಮಾನಿಗಳು ಪುತ್ತಿಲರ ಫೋಟೋಗಳನ್ನು ಹಾಕಿ ಪುತ್ತಿಲರಿಗೆ ನಮ್ಮ ಬೆಂಬಲ ಎಂದು ಹೇಳುತ್ತಿದ್ದಾರೆ.
ಪುತ್ತಿಲರಿಗೆ ಸ್ಪರ್ಧೆ ಅನಿವಾರ್ಯ: ಅತ್ತ ಅರುಣ್ ಕುಮಾರ್ ಪುತ್ತಿಲರಿಗೆ ಈ ಸ್ಪರ್ಧೆ ಅನಿವಾರ್ಯ ಎಂಬಂತಾಗಿದೆ. ಒಂದು ವೇಳೆ ಒತ್ತಡಕ್ಕೆ ಮಣಿದು ಅವರು ಕಣದಿಂದ ಹಿಂದೆ ಸರಿದದ್ದೇ ಆದಲ್ಲಿ ಬಿಜೆಪಿಗೆ ಲಾಭವಾಗುವುದು ಖಚಿತ. ಆದರೆ ಅವರು ಅಂತಹ ನಿರ್ಧಾರ ಮಾಡಿದ್ದಲ್ಲಿ ಪುತ್ತಿಲ ವಿರುದ್ಧ ಅವರದ್ದೇ ಬೆಂಬಲಿಗರು ಅಸಾಮಾಧಾನ ಹೊಂದಿ ತಿರುಗಿ ಬೀಳುವ ಸಾಧ್ಯತೆಯೂ ಇದೆ. ಜೊತೆಗೆ ಅವರ ರಾಜಕೀಯ ಅಸ್ತಿತ್ವವೂ ಅಲ್ಲಿಗೆ ಕೊನೆಯಾಗಬಹುದು ಎನ್ನುವ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಪುತ್ತಿಲ ಅವರು ತಮ್ಮ ತಾಕತ್ತು ತೋರ್ಪಡಿಸದೇ ಇದ್ದಲ್ಲಿ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡ ಸತ್ಯಜಿತ್ ಸುರತ್ಕಲ್, ಮುತಾಲಿಕ್, ತಿಮರೋಡಿ ಅವರ ಪರಿಸ್ಥಿತಿಯೇ ಪುತ್ತಿಲರಿಗೆ ಬರಬಹುದು ಎನ್ನುವ ಮಾತು ಎಲ್ಲಡೆ ಕೇಳಿ ಬಂದಿದೆ. ಹೀಗಾಗಿ ಪುತ್ತಿಲರಿಗೆ ಈ ಸ್ಪರ್ಧೆ ಅನಿವಾರ್ಯ ಎಂಬಂತಾಗಿದೆ.
ಒಟ್ಟಾರೆಯಾಗಿ ಪುತ್ತೂರಿನಲ್ಲಿ ಬಿಜೆಪಿ ಮತ್ತು ಹಿಂದುತ್ವ ವಿಚಾರದಲ್ಲಿ ಜೋರಾದ ಸದ್ದು ಪುತ್ತೂರಿನಲ್ಲಿ ಕೇಳಿ ಬಂದಿದ್ದು ಎಲ್ಲಿಗೆ ಬಂದು ತಲುಪುತ್ತದೆಯೋ ಕಾದು ನೋಡಬೇಕಿದೆ.