ಅಂಗನವಾಡಿಯಲ್ಲಿ ಬಿಸಿ ಸಾಂಬಾರ್ ಬಿದ್ದು ಬಾಲಕಿ ಗಂಭೀರ
ಮಂಡ್ಯ: ಅಂಗನವಾಡಿಯಲ್ಲಿ ಆರು ವರ್ಷದ ಬಾಲಕಿಯ ಮುಖ ಹಾಗೂ ಬೆನ್ನಿನ ಭಾಗಕ್ಕೆ ಬಿಸಿ ಸಾಂಬಾರ್ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು, ಮಾತನಾಡಲು ಹಾಗೂ ಊಟ ಮಾಡಲು ಆಗದ ಸ್ಥಿತಿಯಲ್ಲಿ ಬಾಲಕಿ ಇರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಕಳೆದ ಸೋಮವಾರ ಹೆಮ್ಮನಹಳ್ಳಿ ಅಂಗನವಾಡಿಯಲ್ಲಿ ನಿಹಾರಿಕಾ ಎಂಬ ಬಾಲಕಿಗೆ ಬಿಸಿ ಸಾಂಬಾರ್ ಇದ್ದ ಪರಿಣಾಮ ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಅಂದು ಊಟದ ಸಮಯದಲ್ಲಿ ನಿಹಾರಿಕಾ ವಾಟರ್ ಬಾಟಲ್ ತರಲು ಓಡಿ ಹೋಗಿದ್ದಾಳೆ. ಆ ಕಡೆಯಿಂದ ಅಂಗನವಾಡಿಯ ಆಯಾ ಲಕ್ಷ್ಮಿ ಮಕ್ಕಳಿಗೆ ಊಟ ಬಡಿಸಲು ಬಿಸಿ ಸಾಂಬಾರ್‌ನ್ನು ತರುತ್ತಿದ್ದ ವೇಳೆ ಇಬ್ಬರ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ವೇಳೆ ಆಯಾ ಕೈಯಲ್ಲಿ ಇದ್ದ ಬಿಸಿ ಸಾಂಬಾರ್ ನಿಹಾರಿಕಾಳ ಮುಖ ಹಾಗೂ ಬೆನ್ನಿನ ಭಾಗಕ್ಕೆ ಬಿದ್ದ ಪರಿಣಾಮ ಗಂಭೀರವಾಗಿ ಸುಟ್ಟ ಗಾಯಗಳು ಆಗಿವೆ.
ದಾವಣಗೆರೆ ಮೂಲದ ಮಂಜುನಾಥ್ ಮತ್ತು ಪೂಜಾ ಎಂಬ ದಂಪತಿ ತಮ್ಮ 6 ವರ್ಷದ ಮಗಳು ನಿಹಾರಿಕಾಳೊಂದಿಗೆ ಮಸಾಲೆ ಪದಾರ್ಥಗಳನ್ನು ಮಾರಾಟ ಮಾಡಲು ಮದ್ದೂರಿಗೆ ಬಂದಿದ್ದರು. ಹೆಮ್ಮನಹಳ್ಳಿಯಲ್ಲಿ ಕಳೆದ 5 ತಿಂಗಳಿನಿಂದ ಮನೆ ಮಾಡಿಕೊಂಡು ಊರೂರಿಗೆ ತೆರಳಿ ಮಸಾಲೆ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದರು. ಮಗಳು ನಿಹಾರಿಕಾ ನಮ್ಮ ಜೊತೆ ಬರೋದು ಬೇಡಾ ಎಂದು ಅಂಗನವಾಡಿಗೆ ಪೋಷಕರು ಬಿಟ್ಟು ಹೋಗುತ್ತಾ ಇದ್ದರು. ಅದೇ ರೀತಿ ಸೋಮವಾರ ನಿಹಾರಿಕಾಳನ್ನು ಅಂಗನವಾಡಿಗೆ ಬಿಟ್ಟ ವೇಳೆ ಈ ಘಟನೆ ನಡೆದಿದೆ.
ಸದ್ಯ ನಿಹಾರಿಕಾಗೆ ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಆಕೆಯ ಮುಖದ ಭಾಗಕ್ಕೆ ಸಾಂಬಾರ್ ಬಿದ್ದಿರುವ ಕಾರಣ ತೀವ್ರ ಗಾಯಗಳಾಗಿ ಮಾತನಾಡಲು ಹಾಗೂ ಊಟ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಬಾಲಕಿ ಇದ್ದಾಳೆ. ಇನ್ನೂ ಅಧಿಕಾರಿಗಳು ಒಮ್ಮೆ ಮಾತ್ರ ಆಸ್ಪತ್ರೆಗೆ ಭೇಟಿ ನೀಡಿದ್ದು ಬಿಟ್ಟರೆ, ನಿಹಾರಿಕಾಗೆ ಹೆಚ್ಚಿನ ಚಿಕಿತ್ಸೆ ಕೊಡಿಸುವಲ್ಲಿ ಕೆಲಸ ಮಾಡಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.