ಸುಳ್ಯ: ರಾಜಕಾರಣಿಗಳಿಗೆ ಪ್ರವೇಶ ನಿಷೇಧಿಸಿ ಗೇಟಿನಲ್ಲಿ ಅಳವಡಿಸಲಾದ ಬ್ಯಾನರ್ ಜಾಲತಾಣದಲ್ಲಿ ವೈರಲ್
ಯಾವುದೇ ರಾಜಕಾರಣಿಗಳಿಗೆ ನಮ್ಮ ಮನೆಯ ಗೇಟಿನೊಳಗೆ ಪ್ರವೇಶವಿಲ್ಲ ಎಂಬ ದೊಡ್ಡದಾದ ಫಲಕವನ್ನು ಮನೆಯೊಂದರ ಗೇಟಿನಲ್ಲಿ ಅಳವಡಿಸಿರುವ ಘಟನೆ ಸುಳ್ಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ.
ಸುಳ್ಯ ತಾಲೂಕಿನಾದ್ಯಂತ ನಾನಾ ಭಾಗಗಳಲ್ಲಿ ಸಾರ್ವಜನಿಕರು ಮತದಾನ ಬಹಿಷ್ಕಾರ ಬ್ಯಾನರ್ ಗಳನ್ನು ಅಳವಡಿಸುವ ಮೂಲಕ ಸುಳ್ಯ ತಾಲೂಕಿನಲ್ಲಿ ಸಂಚಲನ ಮೂಡಿಸುತ್ತಿದ್ದರೆ ಇದೀಗ ಅದಕ್ಕೆ ವ್ಯತರಿಕ್ತವಾಗಿ ಮತದಾರರೋರ್ವರು ಯಾವುದೇ ರಾಜಕಾರಣಿಗಳಿಗೆ ನಮ್ಮ ಮನೆಯ ಗೇಟಿನೊಳಗೆ ಪ್ರವೇಶವಿಲ್ಲ ಎಂಬ ಫಲಕವನ್ನು ಅಳವಡಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಸುಳ್ಯ ತಾಲೂಕಿನ ಅಜ್ಜಾವರ ಮುಂಡೋಳಿ ಮೂಲೆಯ ಮನೆಯವರು ಈ ಭಾಗದ ರಸ್ತೆ ನಿರ್ಮಾಣ ಸಂದರ್ಭದಲ್ಲಿ ತಮ್ಮ ಕೃಷಿ ಭೂಮಿಯಿಂದ ರಸ್ತೆಗೆ ಬೇಕಾದ ಮಣ್ಣನ್ನು ನೀಡಿರುತ್ತಾರೆ.ಆದರೆ ರಸ್ತೆಗೆ ಸುರಿಯುವ ಮಣ್ಣು ಮಳೆಗಾಲದಲ್ಲಿ ವಾಪಸ್ ಬಂದು ಮೋರಿಯಲ್ಲಿ ಸಿಕ್ಕಿ ಕೊಳ್ಳುತ್ತಿದ್ದು ಈ ಭಾಗದಲ್ಲಿ ಹರಿದು ಬರುವ ನೀರು ಅವರ ಕೃಷಿ ಭೂಮಿಯಲ್ಲಿ ತುಂಬಿಕೊಳ್ಳುತ್ತಿದೆ. ಇದನ್ನು ಸರಿಪಡಿಸಿಕೊಡುವಂತೆ ಮನವಿ ಸಂಬಂಧಪಟ್ಟವರಿಗೆ ಸಲ್ಲಿಸಿದರೂ ಇದುವರೆಗೆ ಸರಿಯಾಗಿಲ್ಲ.ಅಲ್ಲದೆ ಗಂಗಾ ಕಲ್ಯಾಣ ಯೋಜನೆಯಡಿ ನೀರಿನ ಸಮಸ್ಯೆ ಬಗೆ ಹರಿಸುತ್ತೇವೆಂದು ಶಾಸಕರು ಭರವಸೆ ನೀಡಿದ್ದರು.ಆದರೆ ಇದುವರೆಗೂ ನೀಡಿಲ್ಲ.ಈ ಎಲ್ಲ ಸಮಸ್ಯೆಗಳು ಬಾಕಿ ಇರುವುದರಿಂದ ನಮ್ಮ ಮನೆಯ ಕಡೆಗೆ ರಾಜಕಾರಣಿಗಳು ಬರಬೇಡಿ ಎಂದು ಮುಂಡೋಳಿಮೂಲೆ ಮನೆಯವರು ಈ ಬೋರ್ಡ್ ತಮ್ಮ ಗೇಟಿಗೆ ನೇತು ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.