ಸುಳ್ಯ: ಅಂಗಡಿ ಮುಂಭಾಗ ನಿಲ್ಲಿಸಿದ್ದ ಸ್ಕೂಟಿ ನಾಪತ್ತೆ; ಸ್ಕೂಟಿ ಕೊಂಡೊಯ್ದ ವಿದ್ಯಾರ್ಥಿಗಳು- ತಬ್ಬಿಬ್ಬಾದ ಸ್ಥಳೀಯರು
ಸುಳ್ಯ ಶ್ರೀರಾಮ್ ಪೇಟೆ ಎಸ್ ವಿ ಎಂ ಆಸ್ಪತ್ರೆಯ ಮುಂಭಾಗ ಫ್ರೂಟ್ ಅಂಡ್ ಜ್ಯೂಸ್ ಅಂಗಡಿಯ ಮಾಲಕ ರಫೀಕ್ ಎಂಬುವರು ತಮ್ಮ ಸ್ಕೂಟಿಯನ್ನು ಎಂದಿನಂತೆ ಪಾರ್ಕ್ ಮಾಡಿದ್ದರು.
ಇಂದು ಬೆಳಿಗ್ಗೆ 11:30 ರ ಸಮಯಕ್ಕೆ ಅದೇ ಅಂಗಡಿಯ ಪಕ್ಕದ ಸಂಸ್ಥೆಯ ಸಿಬ್ಬಂದಿ ಓಡಿಬಂದು ನಿಮ್ಮ ಸ್ಕೂಟಿಯನ್ನು ಯಾರೋ ನಾಲ್ಕು ವಿದ್ಯಾರ್ಥಿಗಳು ಕೊಂಡೊಯ್ದರು ಎಂದು ಹೇಳಿದ್ದಾರೆ.
ಈ ವೇಳೆ ಆತಂಕಗೊಂಡ ರಫಿಕ್ ರವರು ಪಕ್ಕದ ಅಂಗಡಿಯ ಸಿಸಿ ಟಿವಿಯಲ್ಲಿ ಪರಿಶೀಲಿಸಿದಾಗ ವಿದ್ಯಾರ್ಥಿಗಳಂತೆ ಕಾಣುತ್ತಿರುವ ನಾಲ್ಕು ಮಂದಿ ಯುವಕರು ಸ್ಕೂಟಿಯನ್ನು ಅಲ್ಲಿಂದ ತೆಗೆದುಕೊಂಡು ಹೋಗುವ ದೃಶ್ಯ ಕಂಡುಬಂದಿದ್ದು
ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.

ಈ ಘಟನೆ ನಡೆದು ಅರ್ಧ ಗಂಟೆಯ ಬಳಿಕ ಸುಳ್ಯದ ಕಾಲೇಜುವೊಂದರ ವಿದ್ಯಾರ್ಥಿ ಕಾರ್ತಿಕ್ ಎಂಬುವರು ಬಂದು ವಾಹನ ಅದಲು ಬದಲು ಗೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಅವರು ತಮ್ಮ ಸ್ಕೂಟಿ ವಾಹನ ಆಕ್ಟಿವಾ 6g ಯಲ್ಲಿ ಶ್ರೀರಾಮ್ ಪೇಟೆ ಬಳಿ ಕರ್ನಾಟಕ ಬ್ಯಾಂಕಿಗೆ ತಮ್ಮ ಸ್ನೇಹಿತರೊಂದಿಗೆ ಬಂದಿದ್ದು ಬ್ಯಾಂಕಿನ ಕೆಲಸ ಮುಗಿದ ಬಳಿಕ ತರಗತಿಗೆ ತಡವಾಗಿದೆ ಎಂದು ಗಡಿಬಿಡಿಗೊಂಡ ಯುವಕರು ಅಲ್ಲೇ ನಿಂತಿದ್ದ ಫ್ರೂಟ್ ಅಂಡ್ ಜ್ಯೂಸ್ ಅಂಗಡಿ ಮಾಲಕ ರಫೀಕ್ ಎಂಬುವರ ಅದೇ ಕಂಪನಿಯ ಅದೇ ಬಣ್ಣದ ವಾಹನವನ್ನು ತಮ್ಮ ಬಳಿ ಇರುವ ಕೀಯನ್ನು ತಿರುಗಿಸಿ ಸ್ಟಾರ್ಟ್ ಮಾಡಲು ಮುಂದಾಗಿದ್ದಾರೆ.
ಸ್ಟಾರ್ಟ್ ಆಗದೇ ಇದ್ದಾಗ ನಾಲ್ವರು ವಿದ್ಯಾರ್ಥಿಗಳು ಸೇರಿ ಅದನ್ನು ಪಕ್ಕದ ಗ್ಯಾರೇಜ್ ಒಂದಕ್ಕೆ ತಳ್ಳಿಕೊಂಡು ಹೋಗಿರುತ್ತಾರೆ.
ಈ ವೇಳೆ ರಫೀಕ್ ರವರು ಶೋರೂಮಿಗೆ ಫೋನ್ ಮಾಡಿ ಅವರ ಅಂಗಡಿ ಬಳಿಯಲ್ಲಿ ನಿಂತಿದ್ದ ಕಾಣೆಯಾದ ತಮ್ಮದೇ ಮಾದರಿಯ ವಾಹನ ನಿಂತಿದ್ದು ಅದರ ಸಂಖ್ಯೆಯನ್ನು ನೀಡಿ ಮಾಲಕರ ದೂರವಾಣಿ ಸಂಖ್ಯೆಯನ್ನು ಸಂಗ್ರಹಿಸಿ ಫೋನ್ ಮಾಡುವ ಪ್ರಯತ್ನದಲ್ಲಿ ಇರುವಾಗ ಸ್ಕೂಟಿಯನ್ನು ತೆಗೆದುಕೊಂಡು ಹೋಗಿದ್ದ ಕಾರ್ತಿಕ್ ಬಂದಿದ್ದಾರೆ.
ವಿದ್ಯಾರ್ಥಿಗಳು ವಾಹನವನ್ನು ಕೊಂಡುಹೋಗಿ ನೀಡಿದ ಮೆಕಾನಿಕ್ ಅಂಗಡಿಯವರು ಗಾಡಿ ಸ್ಟಾರ್ಟ್ ಆಗದ ಕುರಿತು ಪರಿಶೀಲನೆ ನಡೆಸಲು ಶೀಟ್ ಓಪನ್ ಮಾಡಿದಾಗ ಬಾಕ್ಸಿನಲ್ಲಿದ್ದ ಆರ್ ಸಿ ಬೇರೆಯವರದು ಎಂದು ತಿಳಿದಾಗ ಕೊಂಡೋದ ವಾಹನ ಅದಲು ಬದಲು ಗೊಂಡಿದೆ ಎಂಬ ಬಗ್ಗೆ ಗೊತ್ತಾಗಿದೆ ಈ ವಿಷಯವನ್ನು ಕಾರ್ತಿಕ್ ಬಂದು ರಫೀಕ್ ಅವರ ಬಳಿ ಹೇಳಿದ್ದಾರೆ.
ಬಳಿಕ ರಫೀಕ್ ರವರು ಅಲ್ಲಿಗೆ ತೆರಳಿ ತಮ್ಮ ವಾಹನವನ್ನು ತೆಗೆದುಕೊಂಡು ಬಂದಿರುತ್ತಾರೆ. ಒಟ್ಟಿನಲ್ಲಿ ಯುವಕರ ಗಡಿಬಿಡಿಯಿಂದ ಅಂಗಡಿ ಮಾಲಕ ಮತ್ತು ಸ್ಥಳೀಯರು ಕೆಲವು ಕ್ಷಣ ತಬ್ಬಿಬ್ಬಾದರು.