ಮದುವೆಗೆ ಜನ ಬಂದರೂ ಮದುಮಗ ಮಾತ್ರ ಬರಲೇ ಇಲ್ಲ..! ಮದುವೆ ರದ್ದು
ಫೆ.9ರಂದು ಸುಳ್ಯದ ಪುರಭವನದಲ್ಲಿ ನಡೆಯಬೇಕಾಗಿದ್ದ ಮದುವೆಯೊಂದು ವರ ಬಾರದ ಕಾರಣ ರದ್ದುಗೊಂಡ ಘಟನೆ ವರದಿಯಾಗಿದ್ದು, ವರನ ಮೊದಲ ಪತ್ನಿ ಗಂಡನ ಮೇಲೆ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ದೂರು ನೀಡಿರುವಳೆಂದು ತಿಳಿದುಬಂದಿದೆ.
ಉಬರಡ್ಕ ಗ್ರಾಮದ ಯುವತಿಗೆ ಪುತ್ತೂರು ತಾಲೂಕು ರೆಂಜ ಗ್ರಾಮದ ಗುಮ್ಮಟಗದ್ದೆಯ ಎಂಬಾತನೊಂದಿಗೆ ಮದುವೆ ನಿಗದಿಯಾಗಿತ್ತು. ಇಂದು ಕೆ.ವಿ.ಜಿ. ಪುರಭವನದಲ್ಲಿ ಮದುವೆ ನಡೆಯಬೇಕಾಗಿತ್ತು.
ಮದುಮಗನ ಕಡೆಯಿಂದ ಜನ ಬಂದು ಟೌನ್ ಹಾಲ್ ಅಲಂಕಾರವೂ ನಡೆದಿತ್ತು. ನಿನ್ನೆಯ ದಿನ ವಧುವಿನ ಮನೆಯಲ್ಲಿ ಡಿ.ಜೆ. ಅಳವಡಿಸಿ ಸಂಭ್ರಮಪಡಲಾಗಿತ್ತು.
ಇಂದು ವಧುವಿನ ಕಡೆಯವರು ಮದುವೆಗಾಗಿ ಕೆ.ವಿ.ಜಿ. ಟೌನ್ ಹಾಲ್ ಗೆ ಬಂದು ಸಿದ್ಧತೆ ನಡೆಸುತ್ತಿದ್ದರು. 500 ಮಂದಿಗೆ ಭೋಜನದ ವ್ಯವಸ್ಥೆ ಮಾಡಲಾಗುತ್ತಿತ್ತು.
ಇದ್ದಕ್ಕಿದ್ದಂತೆ ಮಾಹಿತಿ ಬಂತು – ವರ ಕಾಣುತ್ತಿಲ್ಲ ಎಂದು. ಅವನ ಫೋನ್ ನಂಬರಿಗೆ ಕರೆ ಮಾಡುವಾಗ ಸ್ವಿಚ್ ಆಫ್. ವಧುವಿನ ಕಡೆಯವರು ಕಂಗಾಲು. ವಿಷಯ ತಿಳಿದು ಬಂದ ದಲಿತ ಮುಖಂಡೆ ಸರಸ್ವತಿಯವರ ನೇತೃತ್ವದಲ್ಲಿ ಸುಳ್ಯ ಪೋಲೀಸ್ ಠಾಣೆಗೆ ವಿಷಯ ತಿಳಿಸಲಾಯಿತು. ಇಷ್ಟೊತ್ತಿಗೆ ತಿಳಿದು ಬಂದ ಮತ್ತೊಂದು ವಿಷಯವೆಂದರೆ, ಆ ವರನಿಗೆ ಈ ಹಿಂದೆ ಒಂದು ಮದುವೆಯಾಗಿದ್ದು, ಅವನ ಹೆಂಡತಿ ಗಂಡನ ವಿರುದ್ಧ ಬೆಳ್ಳಾರೆ ಪೋಲೀಸ್ ಠಾಣೆಗೆ ಹೋಗಿ ದೂರು ಕೊಡಲು ಹೋಗಿದ್ದಾಳೆ ಎಂದು.
ಇನ್ನು ಈ ಮದುವೆ ಆಗುವುದಿಲ್ಲವೆಂದು ತಿಳಿದು ವಧುವಿನ ಕಡೆಯವರು ಸಭಾಂಗಣದಿಂದ ತೆರಳಿದರು. ಸಿದ್ಧಗೊಂಡಿದ್ದ ಊಟವನ್ನು ಹಾಸ್ಟೆಲ್ ಗಳಿಗೆ ಕೊಡುವುದೆಂದು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ
.