ಕೊಯನಾಡು: ಭೂ ಕುಸಿತದ ವೇಳೆ ಹಾನಿಯಾದ ಶಾಲೆಗೆ ಆರು ತಿಂಗಳು ಕಳೆದರೂ ಸಿಕ್ಕಿಲ್ಲ ದುರಸ್ತಿ ಭಾಗ್ಯ: ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ ಸ್ಥಳೀಯರು
ಕೊಡಗು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗವಾದ ಕೊಯನಾಡು ಬಳಿ 2022 ಜುಲೈ ತಿಂಗಳಲ್ಲಿ ಭಾರಿ ಭೂಕುಸಿತಗಳು ಸಂಭವಿಸಿದ್ದವು.
ಈ ವೇಳೆ ಕೊಯ್ನಾಡು ಸರ್ಕಾರಿ ಪ್ರಾಥಮಿಕ ಶಾಲೆಯ ಹಿಂಬದಿಯ ಬೃಹತ್ ಬರೆಯೊಂದು ಕುಸಿತ ಉಂಟಾಗಿ ಶಾಲಾ ಕಟ್ಟಡಕ್ಕೆ ಹಾನಿ ಉಂಟಾಗಿತ್ತು.
ಅಲ್ಲದೆ ಈ ಘಟನೆಯಿಂದಾಗಿ ಶಾಲೆ ಆರಂಭವಾದ ಬಳಿಕ ಸುಮಾರು ಎರಡು ತಿಂಗಳುಗಳ ಕಾಲ ವಿದ್ಯಾರ್ಥಿಗಳಿಗೆ ಕಲಿಕೆಗಾಗಿ ಬೇರೆ ಕಡೆಗಳಲ್ಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಆದರೆ ಈ ಒಂದು ವ್ಯವಸ್ಥೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತುಂಬಾ ಸಮಸ್ಯೆ ಉಂಟಾಗುತ್ತಿತ್ತು.
ಶಾಲೆಯ ದುರಸ್ತಿಗಾಗಿ ರಾಜ್ಯದ ಮುಖ್ಯಮಂತ್ರಿಗಳಿಗೂ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೂ, ಅಧಿಕಾರಿಗಳಿಗೂ ಶಾಲಾ ವಿದ್ಯಾರ್ಥಿಗಳ ಪೋಷಕರು ಮನವಿಗಳನ್ನು ನೀಡಿ ದುರಸ್ತಿಗಾಗಿ ಆಗ್ರಹಿಸಿದ್ದರು.
ಕಳೆದ 60 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಕಾರಿಯದ ಶಾಲೆಯನ್ನು ಉಳಿಸಿಕೊಳ್ಳಲೇಬೇಕು ಎಂಬ ಛಲದಿಂದ ಸ್ಥಳೀಯರೆಲ್ಲ ಸೇರಿ ಶಾಲಾ ರಕ್ಷಣಾ ಸಮಿತಿ ರಚಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಮತ್ತೆ ವಿದ್ಯಾರ್ಥಿಗಳನ್ನು ಅದೇ ಶಾಲೆಗೆ ಕರೆತರುವಲ್ಲಿ ಯಶಸ್ವಿಯಾದರು.
ಆದರೆ ಭೂಕುಸಿತ ಉಂಟಾದ ಸಂದರ್ಭದಲ್ಲಿ ಹಾನಿಯಾದ ಕಟ್ಟಡ ಆತಂಕದ ಸ್ಥಿತಿಯಲ್ಲಿದ್ದು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಆ ಪರಿಸರದಲ್ಲಿ ನಿಲ್ಲಲು ಕೂಡ ಭಯಪಡುವ ವಾತಾವರಣ ಇಂದಿಗೂ ಕೂಡ ಕಂಡುಬರುತ್ತದೆ.
ಈ ಘಟನೆ ಕಳೆದು ಆರು ತಿಂಗಳು ಕಳೆದಿದ್ದರೂ ಇಲ್ಲಿಯವರೆಗೆ ಯಾವುದೇ ರೀತಿಯ ದುರಸ್ತಿ ಕಾರ್ಯ ಅಥವಾ ಬಿದ್ದಿರುವಂತಹ ಮಣ್ಣನ್ನು ತೆರವುಗೊಳಿಸುವ ಕಾರ್ಯ ಇಂದಿಗೂ ನಡೆಯಲಿಲ್ಲ.
ಇದೀಗ ಸ್ಥಳೀಯರು ಮತ್ತು ಶಾಲಾ ವಿದ್ಯಾರ್ಥಿಗಳ ಪೋಷಕರು ಒಂದಾಗಿ ಸರ್ಕಾರವನ್ನು ಆಗ್ರಹಿಸುತ್ತಿದ್ದು ಕೂಡಲೇ ಇಲ್ಲಿ ಬಿದ್ದಿರುವ ಮಣ್ಣುಗಳನ್ನು ತೆರವುಗೊಳಿಸಿ ರಿಟೇನಿಂಗ್ ವಾಲ್ ನಿರ್ಮಾಣ ಮಾಡಿ ದುರಸ್ತಿ ಕಾರ್ಯವನ್ನು ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.
ಇಲ್ಲದಿದ್ದರೆ ಮುಂದಿನ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಬಹಿಷ್ಕಾರದ ನಿರ್ಧಾರವನ್ನು ಕೈಗೊಳ್ಳುವ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ವೇಳೆ ಮಾತನಾಡಿರುವ ಶಾಲಾ ರಕ್ಷಣಾ ಸಮಿತಿಯ ಪದಾಧಿಕಾರಿಗಳು ಮಳೆಗಾಲದಲ್ಲಿ ಈ ರೀತಿ ತೊಂದರೆ ಉಂಟಾದ ಸುಮಾರು ಪ್ರದೇಶಗಳು ಈಗಾಗಲೇ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಆದರೆ ಸಣ್ಣ ಪುಟ್ಟ ವಿದ್ಯಾರ್ಥಿಗಳು ಕಲಿಯುತ್ತಿರುವ ಸರ್ಕಾರಿ ಶಾಲೆಯ ದುರಸ್ತಿಗೆ ಮಾತ್ರ ಮೀನಮೇಷ ಎಣಿಸುತ್ತಿರುವುದು ಎಷ್ಟು ಸರಿ ಎಂದು ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಪ್ರಶ್ನೆಯನ್ನು ಹಾಕುತ್ತಿದ್ದಾರೆ.
ಒಟ್ಟಿನಲ್ಲಿ 60 ವರ್ಷಗಳ ಇತಿಹಾಸವಿರುವ ಈ ಶಾಲೆ ಉಳಿಯಬೇಕು ಮತ್ತು ಬೆಳೆಯಬೇಕು ಎಂಬುದೇ ಈ ಭಾಗದ ಜನರ ಬೇಡಿಕೆಯಾಗಿದೆ. ಇಲ್ಲದಿದ್ದರೆ ಈ ಭಾಗದ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ದುರವಸ್ತೆ ಬರಬಹುದೆಂಬ ಆತಂಕ ವ್ಯಕ್ತವಾಗಿದೆ.