ದ್ವೇಷ ಭಾಷಣ ಅಪಾಯಕಾರಿ: ಸುಪ್ರೀಂಕೋರ್ಟ್: ಮುಕ್ತ ಮತ್ತು ಸಮತೋಲಿತ ವರದಿ ಬಿತ್ತರಿಸುವ ಮಾಧ್ಯಮಗಳು ದೇಶಕ್ಕೆ ಬೇಕು
ನವದೆಹಲಿ: ದ್ವೇಷ ಭಾಷಣ ಅಪಾಯಕಾರಿಯಾಗಿದ್ದು ಮುಕ್ತ ಮತ್ತು ಸಮತೋಲಿತ ವರದಿ ಬಿತ್ತರಿಸುವ ಮಾಧ್ಯಮಗಳು ದೇಶಕ್ಕೆ ಬೇಕಾಗಿದೆ ಎಂದು ಸುಪ್ರೀಂಕೋರ್ಟ್ ಜ.13ರಂದು ಅಭಿಪ್ರಾಯಪಟ್ಟಿದೆ.
ದೇಶದಾದ್ಯಂತ ದ್ವೇಷ ಭಾಷಣ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರಿದ್ದ ನ್ಯಾಯಪೀಠ, ದ್ವೇಷ ಭಾಷಣ ಅಪಾಯಕಾರಿ, ಅದು ನಿಲ್ಲಲೇಬೇಕು’ ಎಂದು ಹೇಳಿತು.
‘ಇತ್ತೀಚಿನ ದಿನಗಳಲ್ಲಿ ಸುದ್ದಿವಾಹಿನಿಗಳು ಟಿಆರ್‌ಪಿಗಾಗಿ ಪರಸ್ಪರ ಸ್ಪರ್ಧೆಗೆ ಇಳಿದು, ಸಮಾಜವನ್ನು ಇಬ್ಭಾಗ ಮಾಡುತ್ತಿವೆ. ದ್ವೇಷ ಭಾಷಣ ಬಿತ್ತುವ ಅಜೆಂಡಾಗಳಲ್ಲಿ ಟಿ.ವಿ ನಿರೂಪಕರೂ ಭಾಗಿಯಾಗಿರುವುದು ಅಚ್ಚರಿ ಉಂಟುಮಾಡಿದೆ’ ಎಂದಿತು.
ಮುದ್ರಣ ಮಾಧ್ಯಮಗಳಂತೆ ದೃಶ್ಯ ಮಾಧ್ಯಮಗಳಿಗೆ ‘ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ’ ಯಾಕಿಲ್ಲ ಎಂದೂ ಪೀಠ ಪ್ರಶ್ನಿಸಿತು.