ಕರಾವಳಿ

ಸಂಜೀವ ಪೂಜಾರಿಯನ್ನು ಕೂಡಲೇ ಬಂಧಿಸಲು ಒತ್ತಾಯಿಸಿ ವಿಹಿಂಪ ಪ್ರತಿಭಟನೆ



ಸುಳ್ಯ: ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಭಜನೆ ಮತ್ತು ಭಜಕರ ಬಗ್ಗೆ ಅವಹೇಳನಕಾರಿ ಬರವಣಿಗೆಯೊಂದು ಹರಿದಾಡಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಆಕ್ರೋಶಗೊಂಡಿದ್ದ ಹಿಂದೂಪರ ಸಂಘಟನೆಗಳ ಮುಖಂಡರು ಹಿಂದೂ ಧರ್ಮದ ಆಚಾರ ವಿಚಾರದ ಕುರಿತು ಅಶ್ಲೀಲ ಪದಗಳನ್ನು ಬಳಸಿ ಹರಿಯಬಿಟ್ಟ ಕಾಣಿಯೂರು ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರನ್ನು ಕೂಡಲೇ ಬಂಧಿಸಿ ಕಾನೂನು ಪ್ರಕಾರ ಹುದ್ದೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹ ವ್ಯಕ್ತಪಡಿಸಿದ್ದರು.

ಇಂದು ಇದೇ ವಿಷಯಕ್ಕೆ ಸಂಬಂಧಿಸಿ ವಿಶ್ವ ಹಿಂದೂ ಪರಿಷತ್ತಿನ ಮುಖಂಡರು ಮತ್ತು ಕಾರ್ಯಕರ್ತರು ಬೆಳ್ಳಾರೆ ಪೋಲಿಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿ ಆರೋಪಿ ಸಂಜೀವ ಪೂಜಾರಿಗೆ ಕಾನೂನು ಕ್ರಮ ತೆಗೆದುಕೊಳ್ಳಲು ಪೊಲೀಸ್ ಇಲಾಖೆಯವರು ಮೀನ ಮೇಷ ಎಣಿಸುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ದಿಕ್ಕಾರದ ಘೋಷಣೆ ಕೂಗಿದರು.


ಬಳಿಕ ಸ್ಥಳೀಯ ಬೆಳ್ಳಾರೆ ಪೋಲಿಸ್ ಠಾಣೆಯ ಎಸ್.ಐ ಸುಭಾಷ್ ರವರ ಮುಖಾಂತರ ಮನವಿ ಪತ್ರ ನೀಡಿ ಕೂಡಲೇ ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಹಿಂದೂ ಧರ್ಮಕ್ಕೆ ಮಾಡಿರುವ ಅವಮಾನಕ್ಕೆ ತಕ್ಕ ಶಿಕ್ಷೆಯನ್ನು ಕಾನೂನಿನ ಅಡಿಯಲ್ಲಿ ನೀಡಬೇಕು ಮತ್ತು ಅವರು ಮಾಡುತ್ತಿರುವ ಸರ್ಕಾರಿ ಹುದ್ದೆಯಿಂದ ಅವರನ್ನು ಕೂಡಲೇ ವಜಾ ಗೊಳಿಸಬೇಕೆಂದು ಆಗ್ರಹಿಸಿದರು.


ಈ ಸಂದರ್ಭದಲ್ಲಿ ಸುಳ್ಯ ಪೋಲಿಸ್ ಠಾಣೆಯ ಎಸ್.ಐ. ದಿಲೀಪ್ ರವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಐ ಕಾನೂನು ಪ್ರಕಾರ ಆರೋಪಿಯ ಮೇಲೆ ಕ್ರಮ ಕೈಗೊಳ್ಳಲಾಗುವುದು, ತಪ್ಪಿತಸ್ಥರನ್ನು ಯಾವುದೇ ರೀತಿಯಲ್ಲಿ ಬಿಡುವಂತಹ ಪ್ರಶ್ನೆಯೇ ಇಲ್ಲ ಕಾನೂನಿನ ರೀತಿಯಲ್ಲಿ ಏನೆಲ್ಲಾ ಮಾಡಬೇಕು ಅದನ್ನು ಪೂರ್ಣವಾಗಿ ಪೋಲಿಸ್ ಇಲಾಖೆ ಮಾಡುತ್ತದೆ. ಆದ್ದರಿಂದ ಕಾನೂನನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪ್ರತಿಭಟನಕಾರರನ್ನು ಉದ್ದೇಶಿಸಿ ಹೇಳಿ ಪ್ರತಿಭಟನಕಾರರ ಮನವಿಗೆ ಸ್ಪಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಜರಂಗದಳ ಜಿಲ್ಲಾ ಸಹ ಸಂಚಾಲಕ ಲತೀಶ್ ಗುಂಡ್ಯ ಮಾತನಾಡಿ ಅಸಂಖ್ಯಾತ ಹಿಂದೂ ಬಾಂಧವರಿಗೆ ಹಾಗೂ ಮನಸ್ಸಿನ ಶಾಂತಿ ನೆಮ್ಮದಿಗಾಗಿ ದೇವರನ್ನು ಒಲಿಸುವ ಸುಲಭ ಸಾಧನವೆಂಬುದನ್ನರಿತು ಭಜಿಸುವ ಭಜಕರಿಗೆ ಅತ್ಯಂತ ನೋವು ತರುವ ನೀಚ ಕೆಲಸಕ್ಕೆ ಮುಂದಾಗಿರುವ ಒಬ್ಬ ಸರಕಾರಿ ಸೇವಕ ಸಂಜೀವ ಎಂಬವರನ್ನು ಮುಂದೆ ನಿಗದಿಪಡಿಸಿದ ದಿನಗಳ ಒಳಗಾಗಿ ಬಂಧಿಸಿ ಸರಕಾರಿ ಉದ್ಯೋಗದಿಂದ ಅಮಾನತು ಮಾಡಬೇಕು. ಇಲ್ಲವಾದಲ್ಲಿ ಮತ್ತೆ ಇಡೀ ತಾಲೂಕಿನ ಎಲ್ಲಾ ಭಜನಾ ಮಂಡಳಿಯವರನ್ನು ಹಾಗೂ ಸಂಘಟನೆಯ ಕಾರ್ಯಕರ್ತರನ್ನು ಒಟ್ಟು ಸೇರಿಸಿ ತಾಲೂಕು ಕೇಂದ್ರ ದಲ್ಲಿ ಇಡೀ ದಿವಸ ಕುಳಿತು ಪ್ರತಿಭಟಿಸಲಾಗುವುದೆಂದು ಎಚ್ಚರಿಕೆ ನೀಡಿದರು.


ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಸತೀಶ್ ಕಲ್ಮಕ್ಕಾರು ಮಾತನಾಡಿ ಧರ್ಮಸ್ಥಳ ಕ್ಷೇತ್ರದ ಮೂಲಕ ಭಜನೆಯಿಂದ ಬದಲಾವಣೆಯೊಂದಿಗೆ ಸಮಾಜದಲ್ಲಿ ಕಟ್ಟ ಕಡೆಯ ವ್ಯಕ್ತಿಯು ಭಜನೆಯಲ್ಲಿ ತೊಡಗಿಸಿಕೊಂಡು ಗೌರವಕ್ಕೆ ಪಾತ್ರರಾಗಿ ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಳ್ಳುವ ಹಂತದಲ್ಲಿ ಕೋಟ್ಯಾಂತರ ಭಕ್ತರ ಮನಸ್ಸಿಗೆ ಘಾಸಿ ಮಾಡುವ ಹೇಯ ಕೃತ್ಯಕ್ಕೆ ಮುಂದಾಗಿರುವ ಸರಕಾರಿ ಉದ್ಯೋಗಿ ಸಂಜೀವ ಎಂಬವರ ನಡೆಯನ್ನು ಪರಿಷತ್ ವತಿಯಿಂದ ತೀವ್ರವಾಗಿ ಖಂಡಿಸುತ್ತೇವೆ. ತಪ್ಪಿತಸ್ಥ ವ್ಯಕ್ತಿ ಯಾರೇ ಆದರೂ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿ.ಹೆಚ್.ಪಿ ಅಧ್ಯಕ್ಷ ಸೋಮಶೇಖರ ಪೈಕ, ವರ್ಷಿತ್ ಚೊಕ್ಕಾಡಿ, ನವೀನ್ ಎಲಿಮಲೆ,
ಶ್ರೀನಾಥ್ ಬಾಳಿಲ, ರಂಜಿತ್ ಸುಳ್ಯ, ಸನತ್ ಚೊಕ್ಕಾಡಿ, ಸಚಿನ್ ಪೂವಾಜೆ, ಸಂತೋಷ್ ಬೆಳ್ಳಾರೆ, ರೂಪೇಶ್ ಪೂಜಾರಿ ಮನೆ, ಭರತ್ ಬೆಳ್ಳಾರೆ ಹಾಗೂ ಸಂಘಟನೆಯ ಕಾರ್ಯಕರ್ತರು ಮತ್ತು ಭಜನಾ ಪರಿಷತ್ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!