ಜಲೀಲ್ ಹತ್ಯೆ ಖಂಡಿಸಿ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈಎಸ್-ಎಸ್ಸೆಸ್ಸೆಫ್ ವತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ
ಮಂಗಳೂರು: ಜಲೀಲ್ ಹತ್ಯೆಯನ್ನು ಖಂಡಿಸಿ ಮತ್ತು ಕೊಲೆಯಾದವರ ಕುಟುಂಬಗಳಿಗೆ ಪರಿಹಾರ ನೀಡಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈಎಸ್ – ಎಸೆಸ್ಸೆಫ್ ವತಿಯಿಂದ ಮಂಗಳವಾರ ಸಂಜೆ ಮಂಗಳೂರು ನಗರದ ಮಂಗಳೂರು ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಯಿತು.
ಕೊಲೆಯಾದ ಫಾಝಿಲ್, ಜಲೀಲ್ ಮನೆಗಳಿಗೆ ಮುಖ್ಯಮಂತ್ರಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಬೇಕು. ಹತ್ಯೆಯಾದ ಜಲೀಲ್ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಕೊಲೆ ಪ್ರಕರಣದ ನಿಜವಾದ ಆರೋಪಿಗಳನ್ನು ಬಂಧಿಸಬೇಕು ಮತ್ತು ಅವರ ವಿರುದ್ಧ ಜಾಮೀನು ಸಿಗದಂತಹ ಕಠಿಣ ಸೆಕ್ಷನ್ ವಿಧಿಸಬೇಕು. ಅಪರಾಧ ಕೃತ್ಯ ಎಸಗಿದ ಆರೋಪಿಗಳು ರಾಜಾರೋಷವಾಗಿ ತಿರುಗಾಡುವುದನ್ನು ನಿಲ್ಲಿಸಬೇಕು ಎಂದು ಈ ಸಂದರ್ಭ ಹಕ್ಕೊತ್ತಾಯ ಮಂಡಿಸಲಾಯಿತು.
ಎಸೆಸ್ಸೆಫ್ ಮುಖಂಡ ಮುಹಮ್ಮದ್ ನವಾಝ್ ಸಖಾಫಿ ಅಡ್ಯಾರ್ ಪದವು ಹಕ್ಕೊತ್ತಾಯ ಸಭೆಯನ್ನು ಉದ್ಘಾಟಿಸಿದರು. ಎಸ್‌ವೈಎಸ್ ಮುಖಂಡ ಸಿಎಚ್ ಮುಹಮ್ಮದಲಿ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ವಿವಿಧ ಮುಖಂಡರು ಭಾಗಿಯಾಗಿದ್ದರು.