ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ರೀಲ್ಸ್, ವಿಡಿಯೋಗಳನ್ನು ಹರಿಯಬಿಡುವವರ ವಿರುದ್ಧ ಕಠಿಣ ಕ್ರಮ: ಗೃಹ ಸಚಿವರ ಎಚ್ಚರಿಕೆ
ಬೆಳಗಾವಿ: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ರೀಲ್ಸ್, ವಿಡಿಯೊಗಳನ್ನು ಹರಿಬಿಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ
ಸೋಮವಾರ ಬೆಳಗಾವಿಯ ಸುವರ್ಣ ವಿಧಾನಸೌಧದ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಪ್ರಶ್ನೆಗೆ ಉತ್ತರಿಸಿದ ಅವರು, ಅಶ್ಲೀಲ ವೀಡಿಯೊ ವೈರಲ್ ಮಾಡುವುದು ಸಾಮಾಜಿಕ ಪಿಡುಗು ಇದ್ದಂತೆ ಎಂದರು.
ಇನ್ನೂ, ಸೈಬರ್ ಅಪರಾಧ ನಿಲ್ಲಿಸಲು ಪೊಲೀಸ್ ಕಾಯ್ದೆಗಿಂತ ಸಾರ್ವಜನಿಕರೇ ನೇರವಾಗಿ ವಿರೋಧ ವ್ಯಕ್ತಪಡಿಸಬೇಕು.ಯುವ ಜನತೆ, ಮಕ್ಕಳಿಗೆ ಜಾಗೃತಿ ಮೂಡಿಸಬೇಕು.ಆಗ ನಾವು ಇಂತಹ ರೀಲ್ಸ್, ವಿಡಿಯೊಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗುತ್ತದೆ ಎಂದು ನುಡಿದರು.
ಇದಕ್ಕೂ ಮುನ್ನ ಪಿ.ಆರ್. ರಮೇಶ್ ಪ್ರಸ್ತಾಪಿಸಿ, ಸಾಮಾಜಿಕ ಜಾಲತಾಣಗಳ ರೀಲ್ಸ್, ವೀಡಿಯೊಗಳಿಂದ ಅಶ್ಲೀಲತೆ ಹೆಚ್ಚಿಸಲಾಗುತ್ತಿದೆ. ಜತೆಗೆ, ಜನರ ಬೇರೆ ಕಡೆ ಗಮನ ಸೆಳೆದು ಅಪರಾಧ ಮಾಡಲಾಗುತ್ತಿದೆ. ಇದರ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.