ಬಂಟ್ವಾಳ: ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿ ; ಮಹಿಳೆ ಮೃತ್ಯು
ಬಂಟ್ವಾಳ: ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರು ಬೈಕ್ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ರವಿವಾರ ಸಂಜೆ ಬಿ.ಸಿ.ರೋಡು- ಪುಂಜಾಲಕಟ್ಟೆ ಹೆದ್ದಾರಿಯ ನಾವೂರು ಗ್ರಾಮದ ಫರ್ಲಾದಲ್ಲಿ ನಡೆದಿದೆ.
ನಾವೂರು ಗ್ರಾಮದ ಸೂರ ಕ್ವಾಟ್ರಸ್ ನಿವಾಸಿ ಉಮಾವತಿ(58) ಮೃತಪಟ್ಟ ಮಹಿಳೆ ಅವರು ರವಿವಾರ ಸಂಜೆ ಮನೆಗೆ ತೆರಳುವುದಕ್ಕಾಗಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಮಹಿಳೆ ಉಮಾವತಿಯವರು ಆಕೆಯ ಪತಿ ಸೇಸಪ್ಪ ಪೂಜಾರಿ ಅವರ ಕೊಲೆ ಪ್ರಕರಣದ ಆರೋಪಿಯಾಗಿದ್ದು, 2021 ಮಾರ್ಚ್ 3ರಂದು ಕುಡಿತ ಮತ್ತಿನಲ್ಲಿ ಗಂಡ- ಹೆಂಡತಿಯ ಮಧ್ಯೆ ನಡೆದ ಜಗಳ ಪತಿಯ ಕೊಲೆಯಲ್ಲಿ ಅಂತ್ಯಗೊಂಡಿತು. ಉಮಾವತಿಯವರು ಕತ್ತಿಯಲ್ಲಿ ಹೊಡೆದ ಸಂದರ್ಭದಲ್ಲಿ ಸೇಸಪ್ಪ ಪೂಜಾರಿಯವರು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.