ಸುಳ್ಯ: ಮತ್ತೆ ಸ್ಪೋಟಗೊಂಡ ಪ್ರತಿಷ್ಠಿತ ಕೆವಿಜಿ ಸಂಸ್ಥೆಯ ಸಹೋದರರ ಭಿನ್ನಮತ: ಡಿ.23 ರಿಂದ ಶೈಕ್ಷಣಿಕ ಚಟುವಟಿಕೆಗಳನ್ನು ಬಹಿಷ್ಕರಿಸಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಡಾ.ರೇಣುಕಾ ಪ್ರಸಾದ್
ಸುಳ್ಯದ ಪ್ರತಿಷ್ಠಿತ ಕೆವಿಜಿ ಸಂಸ್ಥೆಯ ಸಹೋದರರ ನಡುವೆ ಉಂಟಾಗಿರುವ ಭಿನ್ನಮತ ಇದೀಗ ತಾರಕಕ್ಕೇರಿದೆ.
ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಅಕಾಡೆಮಿ ಅಧ್ಯಕ್ಷ ಡಾ. ಚಿದಾನಂದ ರವರು ರೇಣುಕಾ ಪ್ರಸಾದ್ ರವರನ್ನು ತೆಗೆದುಹಾಕಿ ಚಿದಾನಂದರ ಪುತ್ರ ಅಕ್ಷಯ್ ಕೆ ಸಿ ಅವರಿಗೆ ಆ ಸ್ಥಾನವನ್ನು ನೀಡಿದ್ದರು. ಅಂದಿನಿಂದ ಇವರ ನಡುವಿನ ಭಿನ್ನಮತ ಹೆಚ್ಚಾಗುತ್ತಾ ಬರುತ್ತಿತ್ತು.
ಡಿ.20ರಂದು ಕೆವಿಜಿ ಡೆಂಟಲ್ ಕಾಲೇಜಿನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಾ. ರೇಣುಕಾ ಪ್ರಸಾದ್ ತಮಗಾಗಿರುವ ನೋವನ್ನು ಸ್ಫೋಟಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು ‘ಸುಳ್ಯದ ಅಮರಶಿಲ್ಪಿ, ಶಿಕ್ಷಣ ತಜ್ಞ, ಡಾ. ಕುರುಂಜಿ ವೆಂಕಟ್ರಮಣ ಗೌಡರು ತನ್ನ ಕೃಷಿ ಮೂಲವನ್ನು
ಆಧಾರವಾಗಿಟ್ಟುಕೊಂಡು ದಿನಾಂಕ 2-3-1967ರಲ್ಲಿ ಆಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ)ಯನ್ನು ಆಗಿನ ಅವರ 8 ಜನ ಹಿತೈಷಿಗಳನ್ನೊಳಗೊಂಡಂತೆ ಆರಂಭ ಮಾಡಿರುತ್ತಾರೆ. ತದ ನಂತರದಲ್ಲಿ ಅಂದಿನ ಲಿಖಿತ ಪತ್ರದಲ್ಲಿ ದಾಖಲಿಸಲ್ಪಟ್ಟಂತೆ, 16 ಜನ ಸ್ಥಾಪಕ ಸದಸ್ಯರುಗಳು ಮತ್ತು 5 ಜನ
ಸಾಕ್ಷಿದಾರರು ಹೀಗೆ ಒಟ್ಟು 21 ಜನಗಳ ಇರುವಿಕೆಯೊಂದಿಗೆ ಈ ಸೊಸೈಟಿ ಆರಂಭವಾಗಿರುತ್ತದೆ.
ಮುಂದೆ 1977ರಲ್ಲಿ ಎ.ಓ.ಎಲ್.ಇ ಇದರ ಆಡಳಿತದಡಿಯಲ್ಲಿ ನೆಹರು
ವಿದ್ಯಾಸಂಸ್ಥೆಯನ್ನು ಪ್ರಥಮವಾಗಿ ಆರಂಭಿಸುವುದರೊಂದಿಗೆ, ಕೆ.ವಿ.ಜಿಯವರು ಸಾಮಾನ್ಯ ಶಿಕ್ಷಣದಿಂದ ಹಿಡಿದು, ವಿವಿಧ
ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕುತ್ತಾ ಬಂದರು. ಆ ಸಂದರ್ಭದಲ್ಲಿ ಕುರುಂಜಿ
ವೆಂಕಟ್ರಮಣ ಗೌಡರು ಎ.ಓ.ಎಲ್.ಇ (ರಿ) ಇದರ ಅಧ್ಯಕ್ಷರಾಗಿ, ಡಾ. ರೇಣುಕಾ ಪ್ರಸಾದ್ ಕೆ.ವಿ, ಪ್ರಧಾನ
ಕಾರ್ಯದರ್ಶಿಯಾಗಿ ಕೆ.ವಿ ಚಿದಾನಂದನವರು, ಉಪಾಧ್ಯಕ್ಷರಾಗಿ, ಹೇಮನಾಥ ಕುರುಂಜಿ ಜೊತೆ ಕಾರ್ಯದರ್ಶಿಯಾಗಿ,
ಶ್ರೀಮತಿ ಜಾನಕಿ ವೆಂಕಟ್ರಮಣ ಗೌಡ, ಶ್ರೀಮತಿ ಶೋಭಾ ಚಿದಾನಂದ, ಡಾ. ಜ್ಯೋತಿ ಆರ್ ಪ್ರಸಾದ್ ಇವರುಗಳು
ನಿರ್ದೇಶಕರುಗಳಾಗಿ ಸಂಸ್ಥೆಗಳನ್ನು ಮುನ್ನಡೆಸಿದರು.
ಡಾ. ವೆಂಕಟ್ರಮಣ ಗೌಡ ಮತ್ತು ಶ್ರೀಮತಿ ಜಾನಕಿ ವೆಂಕಟ್ರಮಣ ಗೌಡರ ಕಾಲದಲ್ಲಿ
ಚಿದಾನಂದನವರು ಅಧ್ಯಕ್ಷರಾಗಿಯೂ, ಡಾ. ರೇಣುಕಾ ಪ್ರಸಾದ್ ಕೆ.ವಿ ಯಾದ ನಾನು ಪ್ರಧಾನ ಕಾರ್ಯದರ್ಶಿಗಳಾಗಿ,
ಇವರೊಂದಿಗೆ ನಿರ್ದೇಶಕರುಗಳಾಗಿ ಶ್ರೀಮತಿ ಶೋಭಾ ಚಿದಾನಂದ, ಡಾ. ಜ್ಯೋತಿ ಆರ್. ಪ್ರಸಾದ್, ಹೇಮನಾಥ
ಕುರುಂಜಿ ಮತ್ತು ಡಾ. ಅಭಿಜ್ಞಾ ಹಾಗೂ ಅಕ್ಷಯ್ ಕುರುಂಜಿಯವರು ಸಾಮಾನ್ಯ ಸದಸ್ಯರಾಗಿ ಅಂದರೆ ಪ್ರತಿ ವರ್ಷ
ನವೀಕರಿಸುವಂತೆ ಕಾರ್ಯ ನಿರ್ವಹಿಸುತ್ತಿದ್ದರು.
ಇದರಲ್ಲಿ ಡಾ. ರೇಣುಕಾ ಪ್ರಸಾದ್ ಕೆ.ವಿ ಯಾದ ನಾನು ಅಕಾಡೆಮಿ ಆಫ್
ಲಿಬರಲ್ ಎಜ್ಯುಕೇಶನ್ (ರಿ) ರಿಜಿಸ್ಟ್ರೇಶನ್ ಆಗಿದ್ದ ಕಾಲದಿಂದಲೂ ಅಂದರೆ ಕಳೆದ 36 ವರ್ಷಗಳಿಂದಲೂ ಪ್ರಧಾನ
ಕಾರ್ಯದರ್ಶಿಯಾಗಿಯೇ ಮುಂದುವರಿದುಕೊಂಡು ಬರುತ್ತಿದ್ದೇನೆ.
ಹೀಗಿದ್ದು ಈ ವಿದ್ಯಾಸಂಸ್ಥೆಗಳನ್ನು ವಿಭಾಗಿಸಲು ಯೋಚಿಸಲಾಗಿ ಬೈಲಾದ ಪ್ರಕಾರ ಇದು ಅಸಾಧ್ಯವಾದ ಕಾರಣ ತಮ್ಮೊಳಗಿನ ಸೌಹಾರ್ದತೆಯ ಒಂದು ನಿರ್ಣಯ ಮಾಡಿಕೊಂಡು 2009 ಮಾರ್ಚ್ 23ರಿಂದ ಡಾ. ಕೆ ವಿ ಚಿದಾನಂದರವರ ಆಡಳಿತಡಿಯಲ್ಲಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಕೆವಿಜಿ ನರ್ಸಿಂಗ್ ಕಾಲೇಜು, ಕೆವಿಜಿ ಕಾನೂನು ಕಾಲೇಜು, ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಅವರಿಗೆ ವಹಿಸಲಾಯಿತು.
ಅದೇ ರೀತಿ ಕೆವಿಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ, ಇಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು ಸರಕಾರಿ ಅನುದಾನಿತ, ಐ ಟಿ ಐ ಸುಳ್ಯ ಸರಕಾರಿ ಅನುದಾನಿತ, ಕೆವಿಜಿ ಐಟಿಐ ಭಾಗಮಂಡಲ, ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕೆವಿಜಿ ಹೈ ಸ್ಕೂಲ್ ಕೊಲ್ಲಮುಗ್ರ ಸರ್ಕಾರಿ ಅನುದಾನಿತ ಇವುಗಳನ್ನು ನನಗೆ ವಹಿಸಲಾಯಿತು.
2020 ರ ಕೊರೋನಾ ಸಂದರ್ಭದಲ್ಲಿ ಸಂಸ್ಥೆಗಳಿಗೆ ಆರ್ಥಿಕ ಸಮಸ್ಯೆ ಉಂಟಾಗಿ ಉದ್ಯೋಗಿಗಳಿಗೆ ವೇತನ ನೀಡಲು ಸಾಧ್ಯವಾಗದೆ ಸಂಸ್ಥೆಯನ್ನು ನಡೆಸಲು ಸಾಧ್ಯವಾಗದೆ ಸಮಸ್ಯೆಗೊಳಗಾಗಿದ್ದೆ. ಈ ಸಂದರ್ಭದಲ್ಲಿ ನಮ್ಮ ತಂದೆಯವರು ಕ್ಷೇಮ ನಿಧಿಯಾಗಿ ಕಾಯ್ದಿರಿಸಿದ್ದ ಕಷ್ಟಕಾಲದಲ್ಲಿ ತೆಗೆಯಲೆಂದು ಇಟ್ಟಿದ್ದ 59 ಕೋಟಿ ರೂಪಾಯಿಯಲ್ಲಿ ಮೂರು ಕೋಟಿ ರೂಪಾಯಿಯನ್ನು ನೀಡಲು ಮನವಿ ಮಾಡಿದ್ದೆ.
ಆದರೆ ಅದಕ್ಕೆ ಒಪ್ಪದ ಡಾ.ಕೆವಿ ಚಿದಾನಂದರವರು ಯಾವುದೇ ಸ್ಪಂದನೆ ನೀಡದೆ ನನ್ನನ್ನು ನನಗೆ ನೀಡಿದ ವ್ಯವಸ್ಥೆಗಳು ನನ್ನದು ನಿನಗೆ ನೀಡಿರುವಂತಹ ವ್ಯವಸ್ಥೆಗಳು ನಿನ್ನದು ಎಂದು ಅಲ್ಲಿಂದ ನನ್ನನ್ನು ಕಳಿಸಿದ್ದರು.
ಅಲ್ಲದೆ ನನ್ನನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆಯುವ ಹುನ್ನಾರವನ್ನು ಕೂಡ ನಡೆಸಿದ್ದು ನಾನು ನ್ಯಾಯಾಲಯದ ಮೊರೆ ಹೋಗಿರುತ್ತೇನೆ. ಇದೀಗ ನನ್ನ ಮನೆಯವರನ್ನು ಕೂಡ ಅಕಾಡೆಮಿಯಿಂದ ಹೊರಹಾಕಲು ಪ್ರಯತ್ನ ಮಾಡುತ್ತಿದ್ದು ಯಾವುದೇ ಸಭೆಗಳಿಗೆ ನಮ್ಮನ್ನು ಆಹ್ವಾನಿಸುತ್ತಿಲ್ಲ.
ಆದ್ದರಿಂದ ಇಲ್ಲಿಯವರೆಗೆ ನ್ಯಾಯಾಲಯವು ನೀಡಿದ ಪ್ರತಿಯೊಂದು ಆದೇಶಗಳನ್ನು ಗೌರವಯುತವಾಗಿ ಪಾಲಿಸಿಕೊಂಡು ಬಂದಿರುವ ನಾನು ಇದೀಗ ಸಂಕಷ್ಟ ಪರಿಸ್ಥಿತಿಯಲ್ಲಿದ್ದು ನನ್ನ ಅಣ್ಣ ಸಂಸ್ಥೆಯ ಮೇಲೆ ಮತ್ತು ಸಿಬ್ಬಂದಿಗಳ ಮೇಲೆ ದೌರ್ಜನ್ಯದ ಮೇಲೆ ದೌರ್ಜನ್ಯವನ್ನು ಎಸುಗುತ್ತಿದ್ದಾರೆ.
ಆದ್ದರಿಂದ ಇದೀಗ ನಮ್ಮ ಸಮಾಜದ ಗುರುಪೀಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ್ದು, ಅವರ ಪಾದ ಪೂಜೆ ಗುರುವಂದನಾ ಕಾರ್ಯಕ್ರಮಗಳನ್ನು ಅತ್ಯಂತ ಭಕ್ತಿ ನಿಷ್ಠೆಯಿಂದ ನನ್ನ ಸಿಬ್ಬಂದಿಗಳೊಂದಿಗೆ ಮಾಡುತ್ತೇನೆಂದು ಈಗಾಗಲೇ ತೀರ್ಮಾನಿಸಿಕೊಂಡಿರುತ್ತೇನೆ. ಈ ಪುಣ್ಯದ ಕಾರ್ಯವನ್ನು ಮುಗಿಸಿ ನಂತರದಲ್ಲಿ ನಾನು ನನ್ನ ಎಲ್ಲಾ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರುಗಳು ಹಾಗೂ ಸಿಬ್ಬಂದಿಗಳೊಂದಿಗೆ ಸೇರಿಕೊಂಡು ನಮ್ಮ ಮೇಲೆ ನಡೆಯುವ ದೌರ್ಜನ್ಯವನ್ನು ನ್ಯಾಯ ಸಿಗುವವರೆಗೆ ಡಿಸೆಂಬರ್ 23ರಿಂದ ನಮ್ಮ ಸಂಸ್ಥೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಡಾಕ್ಟರ್ ಜ್ಯೋತಿ ಆರ್ ಪ್ರಸಾದ್, ಡಾಕ್ಟರ್ ಮೋಕ್ಷ ನಾಯಕ್, ಕೆವಿಜಿ ಪೊಲಿಟೆಕ್ನಿಕ್ ಪ್ರಾಂಶುಪಾಲ ಜಯಪ್ರಕಾಶ್ ಕೆ, ಹಾಗೂ ಇನ್ನಿತರ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಕೆವಿಜಿ ಐಟಿಐ ಕಾಲೇಜು ಅಧಿಕ್ಷಕ ಭವಾನಿ ಶಂಕರ್ ಅಡ್ತಲೆ, ಕೆವಿಜಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.