ಕೆಪಿಸಿಸಿ ಸಂಯೋಜಕ ಹುದ್ದೆಯಿಂದ ಕಾವು ಹೇಮನಾಥ್ ಶೆಟ್ಟಿ ವಿಮುಕ್ತಿ: ತಾರಕಕ್ಕೆರಿದ ಚರ್ಚೆ -ಅಭಿಮಾನಿಗಳ ಆಕ್ರೋಶ
ಪುತ್ತೂರು: ಕೆಪಿಸಿಸಿ ಸಂಯೋಜಕ ಹುದ್ದೆಯಿಂದ ಕಾವು ಹೇಮನಾಥ್ ಶೆಟ್ಟಿ ರವರನ್ನು ವಿಮುಕ್ತಿಗೊಳಿಸಿ ಆದೇಶಿಸಲಾಗಿದೆ.
ಕೊಡಗು ಜಿಲ್ಲಾ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಬರುವ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಂಯೋಜಕರಾಗಿ ಕಾರ್ಯನಿರ್ವಹಿಸಲು ಕಾವು ಹೇಮನಾಥ್ ಶೆಟ್ಟಿರವರನ್ನು ನೇಮಕ ಮಾಡಲಾಗಿತ್ತು. ಆದರೇ ಇದೀಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಈ ಹುದ್ದೆಯಿಂದ ಹೇಮನಾಥ್ ಶೆಟ್ಟಿ ರನ್ನು ವಿಮುಕ್ತಿಗೊಳಿಸಿ ಆದೇಶಿಸಿದ್ದಾರೆ.
ಕೆಪಿಸಿಸಿ ಸಂಯೋಜಕ ಹುದ್ದೆಯಿಂದ ಕಾವು ಹೇಮನಾಥ್ ಶೆಟ್ಟಿರವರನ್ನು ನಿಯುಕ್ತಿಗೊಳಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ಖಚಿತಪಡಿಸಿದ್ದಾರೆ.
ಹೇಮನಾಥ್ ಶೆಟ್ಟಿಯವರನ್ನು ಹುದ್ದೆಯಿಂದ ವಿಮುಕ್ತಿಗೊಳಿಸಿದ ಸುದ್ದಿ ಹರಡುತ್ತಿದ್ದಂತೆ ಪುತ್ತೂರು ವಿಧಾನಸಭಾ ಕ್ಷೇತ್ರದ ಅವರ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆ ಶುರುವಾಗಿದ್ದು ಹೇಮನಾಥ ಶೆಟ್ಟಿ ಪರ ಇರುವ ಕಾಂಗ್ರೆಸ್ ಕಾರ್ಯಕರ್ತರು ವಿಮುಕ್ತಿ ವಿಚಾರವನ್ನು ನಂಬಲು ತಯಾರಿಲ್ಲ.
ಕೆಲವು ದಿನಗಳ ಹಿಂದೆ ಪುತ್ತೂರಿನಲ್ಲಿ ನಡೆದ ಸಭೆಯೊಂದರಲ್ಲಿ ಹೇಮನಾಥ ಶೆಟ್ಟಿಯವರು ಅಶೋಕ್ ರೈ ಬಿಜೆಪಿಯಿಂದ ಕಾಂಗ್ರೆಸ್ ಸೇರುವ ವಿಚಾರದಲ್ಲಿ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದೇ ಅವರಿಗೆ ಮುಳುವಾಯಿತು ಎಂದಾದರೆ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಎಲ್ಲಿಗೆ ಬಂದು ಮುಟ್ಟಿದೆ ಎಂದು ಹೇಮನಾಥ್ ಶೆಟ್ಟಿ ಪರವಾಗಿರುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಸಾಮಾಜಿಕ ಜಾಲತಾಣದಲ್ಲಿ ಅಸಾಮಾಧಾನ ಹೊರ ಹಾಕುತ್ತಿದ್ದಾರೆ.
ಹೇಮನಾಥ ಶೆಟ್ಟಿಯವರನ್ನು ಕೆಪಿಸಿಸಿ ಸಂಯೋಜಕ ಹುದ್ದೆಯಿಂದ ವಿಮುಕ್ತಿಗೊಳಿಸಿದ್ದು ರಾಜಕೀಯ ತಂತ್ರಗಾರಿಕೆಯೇ? ಅಥವಾ ಯಾರನ್ನೋ ಒಲಿಸಲು ಇನ್ಯಾರನ್ನೋ ಬಲಿಪಶು ಮಾಡಲಾಯಿತೇ ಎನ್ನುವ ಬಗ್ಗೆ ಅನುಮಾನ ಶುರುವಾಗಿದೆ.
ಹೇಮನಾಥ್ ಶೆಟ್ಟಿ ಅವರು ಮಾಡಿದ ಭಾಷಣವೊಂದನ್ನು ತಿರುಚಿ ಕೆಪಿಸಿಸಿಗೆ ಪುತ್ತೂರಿನ ಕಾಂಗ್ರೆಸ್ ನವರೇ ಕಳುಹಿಸಿಕೊಟ್ಟು ಕ್ರಮಕ್ಕೆ ಅಗ್ರಹಿಸಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದ್ದು ಹೇಮನಾಥ್ ಶೆಟ್ಟಿಯವರನ್ನು ಕೆಪಿಸಿಸಿ ಸಂಯೋಜಕ ಹುದ್ದೆಯಿಂದ ವಿಮುಕ್ತಿಗೊಳಿಸಿರುವ ಸುದ್ದಿಯನ್ನು ಪುತ್ತೂರಿನ ಕೆಲ ಕಾಂಗ್ರೆಸ್ ಪ್ರಮುಖರೇ ವೈರಲ್ ಮಾಡುತ್ತಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.
ಹೇಮನಾಥ ಶೆಟ್ಟಿ ಅವರನ್ನು ಹುದ್ದೆಯಿಂದ ವಿಮುಕ್ತಿಗೊಳಿಸಿದ್ದು ರಾಜಕೀಯ ತಂತ್ರಗಾರಿಕೆ ಎಂದೂ ಹೇಳಲಾಗುತ್ತಿದ್ದು ಯಾವುದೇ ಸೂಚನೆ ನೀಡದೆ ಏಕಾಏಕಿ ವಿಮುಕ್ತಿಗೊಳಿಸಿರುವ ಹಿಂದಿನ ಮರ್ಮವೇನು ಎನ್ನುವ ನೂರೊಂದು ಪ್ರಶ್ನೆ ಉದ್ಭವವಾಗಿದೆ.