ಗುಜರಾತ್ ಚುನಾವಣೆ: ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಅಗ್ನಿ ಪರೀಕ್ಷೆ
ನನ್ನ ಕುಟುಂಬದಲ್ಲಿನ ವ್ಯತಿರಿಕ್ತ ಸಿದ್ಧಾಂತಗಳಿಂದ ನನಗೆ “ಯಾವುದೇ ಸಮಸ್ಯೆ” ಇದ್ದಂತೆ ಕಾಣುತ್ತಿಲ್ಲ ಎಂದು ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ಗುಜರಾತ್ ನ ಜಾಮ್ ನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಿವಾಬಾ ಜಡೇಜಾ ಅವರು ಹೇಳಿದ್ದಾರೆ.
ನನಗೆ ಯಾವುದೇ ಕಷ್ಟವಿಲ್ಲ, ಒಂದೇ ಕುಟುಂಬದಲ್ಲಿ ವಿಭಿನ್ನ ಸಿದ್ಧಾಂತದ ಜನರು ಇರಬಹುದು” ಎಂದು ರಿವಾಬಾ ಜಡೇಜಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ನನಗೆ ಜಾಮ್‌ನಗರದ ಜನರ ಮೇಲೆ ನಂಬಿಕೆ ಇದೆ, ನಾವು ಒಟ್ಟಾರೆ ಅಭಿವೃದ್ಧಿಗೆ ಒತ್ತು ನೀಡುತ್ತೇವೆ ಹಾಗೂ ಈ ಬಾರಿಯೂ ಬಿಜೆಪಿ ಉತ್ತಮ ಅಂತರದಿಂದ ಗೆಲ್ಲುತ್ತದೆ’’ ಎಂದರು.
ಉತ್ತರ ಜಾಮ್‌ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಿವಾಬಾ ಜಡೇಜಾ ಗುರುವಾರ ಆರಂಭವಾದ ಮೊದಲ ಹಂತದ ಚುನಾವಣೆಯಲ್ಲಿ ರಾಜ್‌ಕೋಟ್‌ನಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ತಂದೆ ಮತ್ತು ಬಿಜೆಪಿಯ ರಿವಾಬಾ ಜಡೇಜಾ ಅವರ ಮಾವ ಅನಿರುದ್ದ ಸಿನ್ಹ ಜಡೇಜಾ ಅವರು ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದರು.
ಕಾಂಗ್ರೆಸ್ ಹಿರಿಯ ನಾಯಕ ಹರಿ ಸಿಂಗ್ ಸೋಲಂಕಿ ಅವರ ಸಂಬಂಧಿಯಾಗಿರುವ ರಿವಾಬಾ ಜಡೇಜಾ ಅವರು 2019 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂದಿದ್ದರು. ರಿವಾಬಾರ ಅತ್ತಿಗೆ ನಯನಾಬಾ ಜಡೇಜಾ, ಕಾಂಗ್ರೆಸ್ ನಾಯಕಿಯಾಗಿದ್ದು, ಅವರು ಕೂಡ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ.