ಅಂಗನವಾಡಿಗೆ ನುಗ್ಗಿದ ನಾಗರ ಹಾವು..!
ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿಗೆ ಪದೇ-ಪದೇ ನಾಗರ ಹಾವೊಂದು ಬರುತ್ತಿದ್ದು, ಮಕ್ಕಳು ಹಾಗೂ ಅಂಗನವಾಡಿ ಸಿಬ್ಬಂದಿ ಆತಂಕದಲ್ಲಿ ಕಾಲಕಳೆಯುವ ಸನ್ನಿವೇಶ ಆನವಟ್ಟಿ ಸಮೀಪದ ತಿಮ್ಮಾಪುರ ಗ್ರಾಮದಲ್ಲಿ ವರದಿಯಾಗಿದೆ.
ಕಟ್ಟಡದ ಚಾವಣಿಯಿಂದ ದೊಡ್ಡಗಾತ್ರದ ನಾಗರ ಹಾವು ಗೋಡೆ ಮೇಲಿಂದ ಇಳಿಯುತ್ತಿದ್ದುದನ್ನು ನೋಡಿ ಮಕ್ಕಳು ಭಯಗೊಂಡಿದ್ದು ತಕ್ಷಣ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ಮಕ್ಕಳನ್ನು ಮನೆಗೆ ಕಳುಹಿಸಿದರು. ಇದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ ಎಂದು ತಿಳಿದು ಬಂದಿದೆ.
ಹಳೆ ಕಟ್ಟಡವಾದ ಕಾರಣ ಇಲಿಗಳು ಇದ್ದು, ಅವುಗಳಿಗಾಗಿ ನಾಗರ ಹಾವು ಆಗಾಗ ಬರುತ್ತದೆ ಎನ್ನಲಾಗಿದ್ದು ನೂತನ ಕಟ್ಟಡ ಸಿದ್ಧವಾಗಿದ್ದು, ತಕ್ಷಣ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನೂತನ ಕಟ್ಟಡದಲ್ಲೇ ಅಂಗನವಾಡಿ ಪ್ರಾರಂಭಿಸಬೇಕು. ಹಳೆಯ ಕಟ್ಟಡವನ್ನು ನೆಲಸಮ ಮಾಡಲು ಕ್ರಮಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.