ಮಗಳನ್ನು ಮದುವೆ ಮಾಡಿ ಕೊಡಲು ಒಪ್ಪದ್ದಕ್ಕೆ ಕೋಪ: ಮನೆಗೆ ನುಗ್ಗಿದ ತಂಡದಿಂದ ಹಲ್ಲೆ
ಉಪ್ಪಿನಂಗಡಿ: ಮಗಳನ್ನು ಮದುವೆ ಮಾಡಿ ಕೊಡಲು ನಿರಾಕರಿಸಿದ ವ್ಯಕ್ತಿಯ ಮನೆಗೆ ತಂಡ ಕಟ್ಟಿಕೊಂಡು ನುಗ್ಗಿದ್ದಲ್ಲದೆ, ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರು ಮಂದಿಯ ಪೈಕಿ ನಾಲ್ವರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಆಯೋಧ್ಯಾನಗರ ಎಂಬಲ್ಲಿನ ನಿವಾಸಿ ತಾಹೀರಾ ಎಂಬಾಕೆ ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಕಳೆದ ಶುಕ್ರವಾರ ರಾತ್ರಿ ಮಹಮ್ಮದ್ ನಿಝಾಮುದ್ದೀನ್ ತೌಫೀಕ್, ಅಬ್ದುಲ್ ಸಲೀಂ, ಮಹಮ್ಮದ್ ಸಫೀಕ್, ನಾಸೀರ್ ಮತ್ತು ಸಮೀರ್ ರವರನ್ನು ಒಳಗೊಂಡ ತಂಡ ಮನೆಗೆ ಅಕ್ರಮ ಪ್ರವೇಶ ಮಾಡಿದ್ದಲ್ಲದೆ, ನನಗೆ ಮತ್ತು ಗಂಡ ಹಾಗೂ ಮಕ್ಕಳಿಗೆ ಅವಾಚ್ಯ ಪದಗಳಿಂದ ಬೈದು, ನನ್ನ ಮೈದುನನಾದ ಯೂಸುಫ್ ರವರನ್ನು ಪೋನ್ ಮಾಡಿ ಕರೆಯಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ನಾನು ಮತ್ತು ಗಂಡ ಉಸ್ಮಾನ್‌ರವರು ಬಿಡಿಸಲು ಹೋದಾಗ, ನಿಝಾಮುದ್ದೀನನು ತಂದಿದ್ದ ಚೂರಿಯಿಂದ ನನ್ನ ಗಂಡ ಉಸ್ಮಾನ್ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಅವರ ಎದೆಗೆ ಚೂರಿಯಿಂದ ತಿವಿದ ಉಳಿದ ಆರೋಪಿಗಳು ದೊಣ್ಣೆ, ಕಲ್ಲು, ಕೈಗಳಿಂದ ಹೊಡೆದು ನಿಮ್ಮೆಲ್ಲರನ್ನೂ ಜೀವ ಸಹಿತ ಬದುಕಲು ಬಿಡುವುದಿಲ್ಲವೆಂದೂ ಬೆದರಿಕೆಯೊಡ್ಡಿ, ತಾವು ಬಂದಿದ್ದ ಬೈಕು ಮತ್ತು ಸ್ಕೂಟರ್‌ಗಳಲ್ಲಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ಉಸ್ಮಾನ್ ರವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಸ್ಮಾನ್ ರವರ ಮಗಳನ್ನು ತನಗೆ ವಿವಾಹ ಮಾಡಿಕೊಡಬೇಕೆಂಬ ನಿಝಾಮುದ್ದೀನ್‌ನ ಕೋರಿಕೆಯನ್ನು ನಿರಾಕರಿಸಿದ ಕೋಪಕ್ಕೆ ನಿಝಾಮುದ್ದೀನ್‌ನು ತಂಡಕಟ್ಟಿಕೊಂಡು ಕೊಲೆಗೈಯಲು ಬಂದಿರುವುದಾಗಿ ದೂರಿನಲ್ಲಿ ಆಪಾದಿಸಲಾಗಿದೆ.
ಪ್ರಕರಣವನ್ನು ದಾಖಲಿಸಿಕೊಂಡಿದ್ದ ಉಪ್ಪಿನಂಗಡಿ ಪೊಲೀಸರು ಆರೋಪಿತರ ಪೈಕಿ ನಿಝಾಮುದ್ದೀನ್ , ಸಲೀಂ, ತೌಫಿಕ್ ಹಾಗೂ ಸಫೀಕ್ ಎಂಬರನ್ನು ಬಂಧಿಸಿದ್ದು, ಉಳಿದಿಬ್ಬರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.