ಸುಳ್ಯ: ಗೋಣಿ ಚೀಲದಲ್ಲಿ ಯುವತಿಯ ಮೃತದೇಹ ಪತ್ತೆಯ ಸುತ್ತ ಸಂಶಯಗಳ ಹುತ್ತ..!
ಸುಳ್ಯದ ಬಾಡಿಗೆ ಮನೆಯೊಂದರಲ್ಲಿ ಯುವತಿಯ ಮೃತದೇಹ ಪತ್ತೆಯಾಗಿರುವ ಘಟನೆಗೆ ಸಂಬಂಧಿಸಿ ಪತಿಯೇ ಪತ್ನಿಯನ್ನು ಕೊಂದು ಪರಾರಿಯಾಗಿರುವ ಶಂಕೆ ಬಲವಾಗಿದ್ದು ಕೊಲೆಯಾದದ್ದು ಆತನ ಪತ್ನಿಯೋ ಅಥವಾ ಬೇರೆ ಯಾರಾದರೂ ಮಹಿಳೆಯೋ ಎನ್ನುವ ಸಂಶಯ ಕೂಡಾ ವ್ಯಕ್ತವಾಗಿದೆ.
ಸುಳ್ಯದ ರೆಸ್ಟೋರೆಂಟ್ ಒಂದರಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಲದ ಮೂಲದ ಇಮ್ರಾನ್ ಎಂಬಾತನ ಬಾಡಿಗೆ ಮನೆಯಲ್ಲಿ ಈ ಮೃತ ದೇಹ ಪತ್ತೆಯಾಗಿದ್ದು ಈತ ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದಾನೆ.
ಇಮ್ರಾನ್ ಕಳೆದ ಐದಾರು ತಿಂಗಳಿನಿಂದ ಸುಳ್ಯದ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದು, ಬೀರಮಂಗಲದ ಬಾಡಿಗೆ ಮನೆಯ ಸಮುಚ್ಛಯದ ಮನೆಯೊಂದನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದ. ಎರಡು ತಿಂಗಳ ಹಿಂದೆ ಮದುವೆ ಎಂದು ಊರಿಗೆ ಹೋದವ ತನ್ನ ಪತ್ನಿ ಎಂದು ವಿಕಲ ಚೇತನಳಾದ ಯುವತಿಯೊಂದಿಗೆ ಬಂದಿದ್ದ.
ಎರಡು ದಿನಗಳ ಹಿಂದೆ ಊರಿಗೆ ತೆರಳುತ್ತೇನೆ ಎಂದು ರೆಸ್ಟೋರೆಂಟ್ ಮಾಲಕರಲ್ಲಿ ಹೇಳಿ ಊರಿಗೆ ತೆರಳಿದ್ದ ಎಂದು ತಿಳಿದು ಬಂದಿದೆ.
ಇಂದು ಈತನ ಪಕ್ಕದ ರೂಂ ನವರಿಗೆ ವಾಸನೆ ಬಂದಾಗ ಸಂಶಯ ಮೂಡಿತು. ” ಆತ ಹೋಗುವಾಗ ಅವನ ಪತ್ನಿಯನ್ನು ಕರೆದುಕೊಂಡು ಹೋಗಿರಲಿಲ್ಲ. ಮೊನ್ನೆ ಮನೆಯಲ್ಲಿ ಕಿರುಚುವ ಶಬ್ದ ಕೇಳಿತ್ತು ” ಎಂದು ಅವರು ಸ್ನೇಹಿತರೊಬ್ಬರಿಗೆ ತಿಳಿಸಿದರೆನ್ನಲಾಗಿದೆ.
ಅವರು ಹೊಟೇಲ್ ಮಾಲಕರ ಗಮನಕ್ಕೆ ಈ ವಿಚಾರ ತಂದರು. ಹೊಟೇಲ್ ಮಾಲಕರು ಪೋಲಿಸರಿಗೆ ವಿಷಯ ತಿಳಿಸಿದರು. ಪೊಲೀಸರು ಇಂದು ಸಂಜೆ ಬಾಡಿಗೆ ಮನೆಗೆ ಹೋಗಿ ಬಾಗಿಲು ಒಡೆದು ಪರಿಶೀಲಿಸುವಾಗ ಮನೆಯೊಳಗೆ ಗೋಣಿ ಚೀಲದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಯಿತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಇಮ್ರಾನ್ ಕುರಿತ ಮಾಹಿತಿ ಕಲೆ ಹಾಕಿದರು. ಇದರ ಆಧಾರದಲ್ಲಿ ಆತನ ಪತ್ತೆಗೆ ಬಲೆ ಬೀಸಲಾಗಿದೆ. ಆತ ಹೋದ ಕ್ಷಣದಿಂದ ಆತನ ಚಲನ ವಲನಗಳ ಮಾಹಿತಿ ಪಡೆಯಲಾಗುತ್ತಿದೆ. ಎರಡು ದಿನಗಳ ಹಿಂದೆ ರಾತ್ರಿ ವೇಳೆಗೆ ಆತ ಮನೆಯಿಂದ ಬ್ಯಾಗ್ ಹಿಡಿದು ಒಬ್ಬನೇ ರಿಕ್ಷಾದಲ್ಲಿ ಪೇಟೆ ಕಡೆಗೆ ಹೋಗಿದ್ದಾನೆಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಅಲ್ಲಿಂದ ಮಂಗಳೂರಿಗೆ ಹೋಗಿ ರೈಲಿನಲ್ಲಿ ತೆರಳಿರಬೇಕೆಂದು ಶಂಕಿಸಲಾಗುತ್ತಿದೆ. ಈ ಕುರಿತ ಎಲ್ಲ ಮಾಹಿತಿಗಳನ್ನೂ ಪೊಲೀಸರು ಕಲೆ ಹಾಕುತ್ತಿದ್ದಾರೆ.
ಪ್ರತಿಷ್ಠಿತ ಆಹಾರ ಸಂಸ್ಥೆಯೊಂದರಲ್ಲಿ ಕುಕ್ ಆಗಿದ್ದ ಇಮ್ರಾನ್ ತನ್ನ ಸ್ನೇಹಿತನೊಬ್ಬನ ಪರಿಚಯದಲ್ಲಿ ಸುಳ್ಯದ ಈ ರೆಸ್ಟೋರೆಂಟ್ ನಲ್ಲಿ ಕೆಲಸಕ್ಕೆ ಸೇರಿದ್ದ ಎಂದು ತಿಳಿದುಬಂದಿದೆ.
ಕೊಲೆಗೀಡಾದ ಯುವತಿಯ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಈ ಘಟನೆ ಸುಳ್ಯದಲ್ಲಿ ಸಂಚಲನ ಮೂಡಿಸಿದ್ದು ಯಾಕೆ ಕೊಲೆ ನಡೆಯಿತು ಎನ್ನುವ ಚರ್ಚೆಯಾಗುತ್ತಿದೆ.
ಇಮ್ರಾನ್ ಒಬ್ಬನೇ ಕೊಲೆ ಮಾಡಿದನೇ ಅಥವಾ ಬೇರೆ ಯಾರಾದರೂ ಕೊಲೆ ನಡೆಸಲು ಸಹಕರಿಸಿದ್ದರರೇ ಎನ್ನುವ ಬಗ್ಗೆಯೂ ತನಿಖೆ ಆಗಬೇಕು ಎನ್ನುವ ಮಾತುಗಳು ಕೇಳಿ ಬಂದಿದೆ.
ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.