ಕರಾವಳಿ

ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ
ಕುದ್ಪಾಜೆಯ ಪ್ರೆಸ್ಟೇಜ್ ಬೋರ್‌ವೆಲ್‌ ವಿಷಯ ಪ್ರಸ್ತಾಪ:
ಪತ್ರಿಕಾ ವರದಿಯ ಮೇಲೆ ವಿಪಕ್ಷ ನಾಯಕ ಬಾಲಕೃಷ್ಣ ಭಟ್ ಗರಂ, ಆಣೆ ಪ್ರಮಾಣದ ಚರ್ಚೆ



ಸುಳ್ಯ ನಗರ ಪಂಚಾಯತ್ ನ ಸಾಮಾನ್ಯ ಸಭೆಯು ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕರ ಅಧ್ಯಕ್ಷತೆಯಲ್ಲಿ ನ.ಪಂ. ಸಭಾಂಗಣದಲ್ಲಿ ಫೆ.14ರಂದು ನಡೆಯಿತು.



ಸಭೆಯಲ್ಲಿ ಕುತ್ಪಾಜೆ ಕಾಲೋನಿಯ ಕುಡಿಯುವ ನೀರಿನ ಯೋಜನೆಯಲ್ಲಿ ಬಂದಿರುವ ಲೋಪದ ಬಗ್ಗೆ ಚರ್ಚೆಗಳು ಬಂದಾಗ ವಿರೋಧ ಪಕ್ಷದ ನಾಯಕ ಬಾಲಕೃಷ್ಣ ಭಟ್ ಕೊಡಂಕೇರಿ ಮಾತನಾಡಿ ಕುತ್ಪಾಜೆ ದಲಿತರ ಕಾಲೋನಿಯ ಬೋರ್ವೆಲ್ ಕೊರೆಯುವ ಬಗ್ಗೆ ನಾನು ವಿರೋಧಪಡಿಸಿದ್ದೇನೆ ಎಂದು ವರದಿ ಬಂದಿದ್ದು, ಇದು ಸತ್ಯಕ್ಕೆ ದೂರವಾದ ವಿಚಾರ. ವರದಿ ಮಾಡಿರುವ ಪತ್ರಕರ್ತರು ಏಕ ಪಕ್ಷಿಯವಾಗಿ ವರದಿ ಮಾಡಿದ್ದಾರೆ ಎಂದು ಆರೋಪಿಸಿದರು.


ಬೋರ್ವೆಲ್ ತೆಗೆಯಲು ನಾನು ವಿರೋಧಪಡಿಸಿದ್ದರೆ ಅವರು ಸತ್ಯ ಪ್ರಮಾಣಕ್ಕೆ ಬರಲಿ ಎಂದು ಹೇಳಿದರು.ಇದಕ್ಕೆ ಉತ್ತರಿಸಿದ ನಾಮನಿರ್ದೇಶಕ ಸದಸ್ಯ ರೋಹಿತ್ ಕೊಯಿಂಗೋಡಿ ಅವರು ಅಡ್ಡಿ ಪಡಿಸದೇ ಇದ್ದರೆ ಇದೇ ಸಭೆಯಲ್ಲಿ ಅವರೇ ಸತ್ಯ ಪ್ರಮಾಣ ಮಾಡಲಿ ಅಧ್ಯಕ್ಷರೇ ಎಂದು ಹೇಳಿದಾಗ ಇದಕ್ಕೆ ಪೂರಕವಾಗಿ ಮಾತನಾಡಿದ ಅಧ್ಯಕ್ಷರು ಕಳೆದ ಕೆಲವು ತಿಂಗಳ ಹಿಂದೆ ನಿಮ್ಮ ವಾರ್ಡಿನಲ್ಲಿ ಬೋರ್ವೆಲ್ ತೆಗೆಯುವ ಸಂದರ್ಭ ಇದೇ ರೀತಿಯ ಘಟನೆಯನ್ನು ಮಾಡಿದ ನಿರ್ದೇಶನಗಳ ಬಗ್ಗೆ ಹೇಳಿದರು.


ಇದನ್ನು ಸಮ್ಮತಿಸಿಕೊಂಡಂತೆ ಬಾಲಕೃಷ್ಣ ಭಟ್ ರವರು ಸುಮ್ಮನಾದ ಘಟನೆ ಸಭೆಯಲ್ಲಿ ನಡೆಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ, ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್ ಉಪಸ್ಥಿತರಿದ್ದರು.



ಸಭೆಯಲ್ಲಿ ಸದಸ್ಯರುಗಳಾದ ಎಂ.ವೆಂಕಪ್ಪ ಗೌಡ, ಬಾಲಕೃಷ್ಣ ಭಟ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕಾರ್, ಶಶಿಕಲಾ ನೀರಬಿದಿರೆ, ಶೀಲಾ ಕುರುಂಜಿ, ಕಿಶೋರಿ ಶೇಟ್, ಶಿಲ್ಪಾ ಸುದೇವ್, ಪ್ರವಿತಾ ಪ್ರಶಾಂತ್, ಪೂಜಿತಾ ಕೆ.ಯು., ಸುಶೀಲ ಜಿನ್ನಪ್ಪ, ಬುದ್ಧ ನಾಯ್ಕ್ ಜಿ, ಸುಧಾಕರ ಕುರುಂಜಿಭಾಗ್, ಬಾಲಕೃಷ್ಣ ರೈ ದುಗಲಡ್ಕ, ನಾರಾಯಣ ಶಾಂತಿನಗರ, ನಾಮನಿರ್ದೇಶಿತ ಸದಸ್ಯರುಗಳಾದ ಬೂಡು ರಾಧಾಕೃಷ್ಣ ರೈ, ರೋಹಿತ್ ಕೊಯಿಂಗೋಡಿ ಭಾಗವಹಿಸಿದ್ದರು.



ಸಭೆಯಲ್ಲಿ ಸುಳ್ಯದ ರಥಬೀದಿಯಲ್ಲಿ ಸರ್ವೋದಯ ಪ್ರೆಸ್ ನ ಬಳಿಯಲ್ಲಿ ಕೊಳಚೆ ನೀರು ಹೋಗುತ್ತಿರುವ ವಿಷಯ,ಸುಳ್ಯದ ಆರ್.ಐ. ಕಚೇರಿ ಬಳಿ ಚರಂಡಿ ನೀರು ಬ್ಲಾಕ್ ಆಗಿರುವ ವಿಷಯ,ತಾಲೂಕು ಪಂಚಾಯತ್,ಜೂನಿಯರ್ ಕಾಲೇಜು,ಕೇರ್ಪಳ ರಸ್ತೆ ಒಳಚರಂಡಿ ಮ್ಯಾನ್‌ ಹೋಲ್ ಬ್ಲಾಕ್ ಈ ಎಲ್ಲಾ ವಿಷಯದ ಕುರಿತು ಸುಧೀರ್ಘ ಚರ್ಚೆಗಳು ನಡೆಯಿತು.
ಮಂಡಳಿಯವರನ್ನು ಕರೆದು ಸಭೆ ಮಾಡಬೇಕೆಂದು ನಾವು ಹೇಳಿದ್ದೇವೆ ಯಾಕೆ ಕರೆಯುತ್ತಿಲ್ಲ ಎಂದು ಸದಸ್ಯರಾದ ಎಂ ವೆಂಕಪ್ಪ ಗೌಡ ಅಧ್ಯಕ್ಷರ ಬಳಿ ಕೇಳಿದರು.



ಒಳಚರಂಡಿ ಯೋಜನೆ ಸರಿ ಇಲ್ಲ. ಅದು ರಿಪೇರಿ ಆಗಬೇಕಿದೆ.ಅದಕ್ಕಾಗಿ ರೂ.4 ಕೋಟಿ ಎಸ್ಟಿಮೇಟ್ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮುಖ್ಯಾಧಿಕಾರಿ ವಿವರ ನೀಡಿದರು.



ಒಳಚರಂಡಿ ಮಂಡಳಿಯವರ ಬರಲು ಹೇಳಿದ್ದೇವೆ ಬಂದಿಲ್ಲ ಎಂದು ಅಧ್ಯಕ್ಷರು ಹೇಳಿದಾಗ, ಅವರಿಗೆ ಪತ್ರ ಬರೆಯಿರಿ ಅವರು ಬಂದೇ ಬರುತ್ತಾರೆ” ಎಂದು ವೆಂಕಪ್ಪ ಗೌಡರು ಸಲಹೆ ನೀಡಿದರು.



ಸುಳ್ಯದ ಕುದ್ಪಾಜೆಯಲ್ಲಿ ಬೋರ್‌ವೆಲ್ ಕೊರೆಸಲು ನಾಮನಿರ್ದೇಶಿತ ಸದಸ್ಯರು ಆಕ್ಷೇಪಿಸುತ್ತಿದ್ದಾರೆಂದು ಆ ವಾರ್ಡ್ ಸದಸ್ಯ ಬಾಲಕೃಷ್ಣ ಭಟ್ ಹೇಳಿದಾಗ, ಬಾಲಕೃಷ್ಣ ಭಟ್‌ರು ಎರಡು ಇಂಚು ನೀರು ಇರುವಲ್ಲಿ ಬೋರ್ ಕೊರೆಸಲು ಹೇಳುತ್ತಿದ್ದಾರೆ..5 ಇಂಚು ನೀರು ಸಿಗುವಲ್ಲಿ ಕೊರೆಸಬೇಕೆಂದು ನಾವು ಹೇಳುತ್ತಿದ್ದೇವೆ. ಅಲ್ಲಿಯ ಜನರ ಬೇಡಿಕೆಯೂ ಅದೇ. ಜನರಿಗೆ ದೀರ್ಘ ಕಾಲ ನೀರು ಸಿಗಬೇಕೆನ್ನುವುದು ನಮ್ಮ ಕೋರಿಕೆ ಎಂದು ನಾಮ ನಿರ್ದೇಶಿತ ಸದಸ್ಯ ರೋಹಿತ್ ಕೊಯಿಂಗೋಡಿ ಹೇಳಿದರು.

ಬಾಲಕೃಷ್ಣ ಭಟ್ ಹಾಗೂ ರೋಹಿತ್ ರವರ ಮಾತಿನ ಬಳಿಕ ಮಾತನಾಡಿದ ಸದಸ್ಯ ಎಂ.ವೆಂಕಪ್ಪ ಗೌಡರು ಇದು ಪ್ರೆಸ್ಟೇಜ್ ಗಾಗಿ ಹೀಗೆ ಆಗುತ್ತಿದೆ ಎಂದು ನಮಗನಿಸುತ್ತಿದೆ. ಆದ್ದರಿಂದ ಇದನ್ನು ಅಲ್ಲಿ ಹೋಗಿ ಸಂದಾನ ರೂಪದಲ್ಲಿ ಮುಗಿಸೋಣ ಎಂದು ಸಲಹೆ ನೀಡಿದರು.

ನಾವು ಬೋರ್‌ವೆಲ್ ಲಾರಿ ತರಿಸುತ್ತೇವೆ ಈ ಎರಡೂ ಪಾಯಿಂಟ್ ಬಿಟ್ಟು ನೀರು ಇರಬಾಹುದಾದ ಜಾಗದಲ್ಲಿ ಮತ್ತೊಂದು ಪಾಯಿಂಟ್ ಗೊತ್ತು ಮಾಡಿ ಬೋರ್ ಕೊರೆಸೋಣ ಎಂದು ಅಧ್ಯಕ್ಷ ವಿನಯ ಕಂದಡ್ಕರು ಸಲಹೆ ನೀಡಿದರು.



ಸದಸ್ಯ ಶರೀಫ್ ಕಂಠಿ ಮಾತನಾಡಿ ನಾವೂರಿನಲ್ಲಿ ಕಾಂಕ್ರೀಟ್ ರಸ್ತೆ ನಡುವಿನಲ್ಲೇ ನೀರಿನ ಪೈಪು ಹೋಗುತ್ತಿದೆ. ಪಕ್ಕದಲ್ಲಿ ಹೊಸ ಪೈಪ್ ಲೈನ್ ಅಳವಡಿಸಿ ನೀರು ಸರಬರಾಜಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಕೇಳಿಕ್ಕೊಂಡರು.

ಸಭೆಯಲ್ಲಿ ನಗರದ ವಿದ್ಯುತ್ ದಾರಿ ದೀಪಗಳ ಬಗ್ಗೆ, ರಸ್ತೆ, ಚರಂಡಿ, ಕುಡಿಯುವ ನೀರಿನ ಬಗ್ಗೆ ಚರ್ಚೆಗಳು ನಡೆದವು.

Leave a Reply

Your email address will not be published. Required fields are marked *

error: Content is protected !!