ಶಿಕ್ಷಕರಿಲ್ಲದೆ ದ.ಕ. ಜಿಲ್ಲೆಯಲ್ಲಿ 24 ಸರಕಾರಿ ಶಾಲೆ ಮುಚ್ಚುವ ಭೀತಿ
ಮಂಗಳೂರು, ನ. 18: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ. ಈ ಎಲ್ಲ ಶಾಲೆಗಳಲ್ಲಿ ಮಕ್ಕಳಿದ್ದರೂ ಶಿಕ್ಷಕರ ಸಂಖ್ಯೆ ಶೂನ್ಯವಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಸ್ಥಿತಿ ಎದುರಾಗಿದೆ ಎಂದು ಕನ್ನಡ ಸೇನೆ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆರೋಪಿಸಿದೆ.
ಘಟಕದ ದ.ಕ. ಜಿಲ್ಲಾ ಕಾರ್ಯಾಧ್ಯಕ್ಷ ಗುರುಚಂದ್ರ ಹೆಗ್ಡೆ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರು ಉತ್ತರ ವಲಯದಲ್ಲಿ 6, ದಕ್ಷಿಣದಲ್ಲಿ 3, ಮೂಡುಬಿದಿರೆ 5, ಬೆಳ್ತಂಗಡಿ 3, ಪುತ್ತೂರು 1, ಬಂಟ್ವಾಳ 4, ಸುಳ್ಯದ 1 ಶಾಲೆಯಲ್ಲಿ ಸರಕಾರಿ ಶಿಕ್ಷಕರೇ ಇಲ್ಲ. ಹೀಗಾಗಿ ಈ ಎಲ್ಲ ಶಾಲೆಗಳು ಯಾವುದೇ ಸಂದರ್ಭದಲ್ಲಿ ಮುಚ್ಚುವ ಪರಿಸ್ಥಿತಿಯಿದೆ. ಮಂಗಳೂರಿನ ದೇರೆಬೈಲ್ ಹೋಲಿ ಫ್ಯಾಮಿಲಿ ಹಿರಿಯ ಪ್ರಾಥಮಿಕ ಶಾಲೆ ಈಗಾಗಲೇ ಮುಚ್ಚಿದೆ ಎಂದರು.
ದ.ಕ. ಜಿಲ್ಲೆಯಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಷಡ್ಯಂತ್ರದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಉನ್ನತ ಅಧಿಕಾರಿಗಳು ಶಾಮೀಲಾಗಿರುವ ಅನುಮಾನವಿದೆ. ಈ ಬಗ್ಗೆ ತತ್‌ಕ್ಷಣ ತನಿಖೆ ನಡೆಸಬೇಕು ಹಾಗೂ ರಾಜ್ಯದಲ್ಲಿ ಯಾವುದೇ ಕನ್ನಡ ಶಾಲೆಗಳನ್ನು ಮುಚ್ಚಬಾರದು ಎಂದವರು ಆಗ್ರಹಿಸಿದರು.
ಕನ್ನಡ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಮಾಡದಿರುವುದು ಹಾಗೂ ಶಾಲೆಗಳನ್ನು ಮುಚ್ಚುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.
ಕನ್ನಡ ಸೇನೆ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ಉಪಾಧ್ಯಕ್ಷ ಗಂಗಾಧರ ಆಳ್ವ ಪತ್ರಿಕಾಗೋಷ್ಠಿಯಲ್ಲಿದ್ದರು.