ಬದಿಯಡ್ಕದಿಂದ ನಾಪತ್ತೆಯಾಗಿದ್ದ ವೈದ್ಯರ ಮೃತದೇಹ ಕುಂದಾಪುರ ಸಮೀಪ ರೈಲ್ವೆ ಹಳಿಯಲ್ಲಿ ಪತ್ತೆ
ಕಾಸರಗೋಡು: ಬದಿಯಡ್ಕದಿಂದ ನಾಪತ್ತೆಯಾಗಿದ್ದ ವೈದ್ಯರ ಮೃತದೇಹ ಕುಂದಾಪುರ ಸಮೀಪ ರೈಲ್ವೆ ಹಳಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿದ್ದು ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿದೆ.
ಬದಿಯಡ್ಕದ ದಂತ ವೈದ್ಯ ಡಾ. ಎಸ್. ಕೃಷ್ಣ ಮೂರ್ತಿ (57) ಮೃತಪಟ್ಟವರು.
ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆಯಾದ ಬಗ್ಗೆ ಲಭಿಸಿದ ಮಾಹಿತಿಯಂತೆ ಕೃಷ್ಣ ಮೂರ್ತಿರವರ ಕುಟುಂಬಸ್ಥರು ಕುಂದಾಪುರಕ್ಕೆ ತೆರಳಿ ಗುರುತು ಪತ್ತೆ ಹಚ್ಚಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಇಂದು ಊರಿಗೆ ತರಲಾಗುತ್ತದೆ.
ನ. 8ರಂದು ಮಧ್ಯಾಹ್ನ ಬಳಿಕ ವೈದ್ಯರು ನಾಪತ್ತೆಯಾಗಿದ್ದರು. ಈ ಬಗ್ಗೆ ಪತ್ನಿ ನೀಡಿದ ದೂರಿನಂತೆ ಬದಿಯಡ್ಕ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು.
ವೈದ್ಯರ ಬೈಕ್ ಕುಂಬಳೆ ಪೇಟೆಯಲ್ಲಿ ಪತ್ತೆಯಾಗಿತ್ತು. ಮೊಬೈಲ್ ಕ್ಲಿನಿಕ್ ನಲ್ಲೇ ಬಿಟ್ಟು ತೆರಳಿದ್ದರು.
ಕ್ಲಿನಿಕ್ ಗೆ ಬಂದಿದ್ದ ಮಹಿಳೆ ಜೊತೆ ವೈದ್ಯರು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು , ಈ ಬಗ್ಗೆ ತಂಡವೊಂದು ಕ್ಲಿನಿಕ್ ಗೆ ತೆರಳಿ ವೈದ್ಯರನ್ನು ತರಾಟೆಗೆ ತೆಗೆದು ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ. ಇದಲ್ಲದೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಈ ಬೆಳವಣಿಗೆ ಬಳಿಕ ಡಾ. ಕೃಷ್ಣಮೂರ್ತಿ ನಿಗೂಢವಾಗಿ ನಾಪತ್ತೆಯಾಗಿದ್ದರು.
ನಾಪತ್ತೆ ಹಿನ್ನಲೆಯಲ್ಲಿ ಬದಿಯಡ್ಕ ಪೊಲೀಸರು ಕೇರಳ ಹಾಗೂ ಕರ್ನಾಟಕದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದರು.
ವೈದ್ಯರನ್ನು ಕೂಡಲೇ ಪತ್ತೆ ಹಚ್ಚುವಂತೆ ಒತ್ತಾಯಿಸಿ ದಂತ ವೈದ್ಯರ ಸಂಘಟನೆಯ ಕಾಸರಗೋಡು ಘಟಕ ನೇತೃತ್ವದಲ್ಲಿ ಗುರುವಾರ ಬದಿಯಡ್ಕದಲ್ಲಿ ಧರಣಿ ಸತ್ಯಾಗ್ರಹ ನಡೆದಿತ್ತು.