ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಮೂತ್ರಪಿಂಡ ದಾನ ಮಾಡಲಿರುವ ಪುತ್ರಿ ರೋಹಿಣಿ
ಹೊಸದಿಲ್ಲಿ: ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿರುವ ಬಿಹಾರದ ಮಾಜಿ ಸಿಎಂ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಅವರ ಮಗಳು ರೋಹಿಣಿ ಆಚಾರ್ಯ ಮೂತ್ರಪಿಂಡ ದಾನ ಮಾಡಲಿದ್ದಾರೆ. ಲಾಲು ಯಾದವ್ ಅವರು ಈ ತಿಂಗಳ ಅಂತ್ಯದಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
ತಂದೆಗೆ ಸ್ವತಃ ಕಿಡ್ನಿ ನೀಡುತ್ತಿರುವ ವಿಷಯವನ್ನು ರೋಹಿಣಿ ಆಚಾರ್ಯ ಖಚಿತಪಡಿಸಿದ್ದಾರೆ. “ಹೌದು, ಇದು ನಿಜ. ನಾನು ಅದೃಷ್ಟದ ಕೂಸು. ತಂದೆಗೆ ನನ್ನ ಕಿಡ್ನಿ ನೀಡುತ್ತಿರುವುದು ನನಗೆ ಹೆಮ್ಮೆ ಉಂಟುಮಾಡುತ್ತಿದೆ” ಎಂದು ಲಾಲು ಯಾದವ್ ಅವರ ಎರಡನೇ ಮಗಳು ರೋಹಿಣಿ ತಿಳಿಸಿದ್ದಾರೆ. ರೋಹಿಣಿ ಆಚಾರ್ಯ ಅವರು ಸಿಂಗಪುರದಲ್ಲಿ ನೆಲೆಸಿದ್ದಾರೆ.
ಸಿಂಗಪುರಕ್ಕೆ ಚಿಕಿತ್ಸೆಗೆಂದು ತೆರಳಿದ್ದ 74 ವರ್ಷದ ಲಾಲು ಯಾದವ್ ಅವರು ಕಳೆದ ತಿಂಗಳು ಸ್ವದೇಶಕ್ಕೆ ಮರಳಿದ್ದರು. ಹಿರಿಯ ರಾಜಕಾರಣಿ ಹಾಗೂ ಬಿಹಾರದಲ್ಲಿ ಮೂರು ಬಾರಿ ಸಿಎಂ ಆಗಿದ್ದ ಲಾಲು ಪ್ರಸಾದ್ ಯಾದವ್ ಅವರು ಬಹು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮೂತ್ರಪಿಂಡ ಕಸಿ ಸರ್ಜರಿಗೆ ಒಳಗಾಗುವಂತೆ ಅವರಿಗೆ ಇತ್ತೀಚೆಗೆ ಸಲಹೆ ನೀಡಲಾಗಿತ್ತು.