ಕೊಲೆ ಪ್ರಕರಣ: ಬಾಲಕನನ್ನು ಬಿಹಾರದಲ್ಲಿ ಬಂಧಿಸಿದ ಪೊಲೀಸರು
ಬೆಂಗಳೂರು: ಪರಿಚಿತನ ತಲೆಗೆ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪದಲ್ಲಿ ಬಾಲಕನನ್ನ ಕೆ.ಎಸ್.ಲೇಔಟ್ ಠಾಣೆ ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದಾರೆ.

2022ರ ಅ.21ರಂದು ರಾತ್ರಿ ಕೆ ಎಸ್ ಲೇಔಟ್ ವ್ಯಾಪ್ತಿಯ ಕಾಶಿನಗರ ಸರ್ಕಲ್‍ನ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿದ್ದ ಘಟನೆಯಲ್ಲಿ ಪಾಟ್ನಾ ಮೂಲದ ಮುಖೇಶ್ ಎಂಬಾತನನ್ನ ಹತ್ಯೆ ಮಾಡಲಾಗಿತ್ತೆನ್ನಲಾಗಿದೆ.
ಬಿಹಾರ ಮೂಲದವರಾದ ಕೊಲೆಯಾದ ಮುಖೇಶ್ ಹಾಗೂ ಆರೋಪಿ ಬಾಲಕ ಕಾಶಿನಗರ ಸಮೀಪ ನಿರ್ಮಾಣ ಹಂತದ ಕಟ್ಟಡದಲ್ಲಿ ಟೈಲ್ಸ್ ವರ್ಕ್ ಕೆಲಸ ಮಾಡಿಕೊಂಡಿದ್ದರು. ಇಬ್ಬರಿಗೂ ಸಹ ರಾತ್ರಿ ಅಲ್ಲಿಯೇ ತಂಗಲು ಅವಕಾಶ ನೀಡಲಾಗಿತ್ತು ಎಂದು ಹೇಳಲಾಗಿದೆ.
ಅ.21ರಂದು ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ಆರಂಭವಾದ ಗಲಾಟೆ ಮುಖೇಶ್ ಹತ್ಯೆಯೊಂದಿಗೆ ಅಂತ್ಯವಾಗಿತ್ತು ನಂತರ ಆರೋಪಿಯು ಪಾಟ್ನಾಗೆ ಪರಾರಿಯಾಗಿದ್ದ. ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದ ಕೆ ಎಸ್ ಲೇಔಟ್ ಪೊಲೀಸರು ಪಾಟ್ನಾಗೆ ತೆರಳಿ ಕೊನೆಗೂ ಆರೋಪಿಯನ್ನು ಬಂಧಿಸಿದ್ದಾರೆ.