ಪತ್ರಕರ್ತರಿಗೆ ಮುಖ್ಯಮಂತ್ರಿ ಕಚೇರಿಯಿಂದ 2.5 ಲಕ್ಷ ರೂ. ಹಣ: ಕೂಡಲೇ ಲೋಕಾಯುಕ್ತ ತನಿಖೆಯಾಗಲಿ- ಹಿರಿಯ ಪತ್ರಕರ್ತರ ಆಗ್ರಹ
ಬೆಂಗಳೂರು: ಕೆಲವು ಆಯ್ದ ಪತ್ರಕರ್ತರಿಗೆ ಮುಖ್ಯಮಂತ್ರಿ ಕಚೇರಿಯಿಂದ ತಲಾ 2.5 ಲಕ್ಷ ರುಪಾಯಿ ಹಣ ನೀಡಿರುವ ಪ್ರಕರಣ ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಹಿರಿಯ ಪತ್ರಕರ್ತರು ಆಗ್ರಹಿಸಿದ್ದಾರೆ.
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಈ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಲೋಕಾಯುಕ್ತರು, ಮತ್ತು ಚುನಾವಣಾ ಆಯುಕ್ತರು ಕೂಡಲೇ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
‘ಇಂದು ಬೆಳಗ್ಗಿನಿಂದ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಕಚೇರಿಯಿಂದ, ಸಚಿವರ ಕಚೇರಿಗಳಿಂದ ರಾಜ್ಯದ ಹಲವು ಪತ್ರಕರ್ತರಿಗೆ ದೀಪಾವಳಿ ಇನಾಮಿನ ಜೊತೆಯಲ್ಲಿ ನಗದು ಹಣವನ್ನು ನೀಡಲಾಗಿದೆ ಎಂಬ ವದಂತಿಗಳು ಹಬ್ಬಿವೆ. ಇದು ಹೌದೆಂದಾಗಿದ್ದಲ್ಲಿ, ಚುನಾವಣಾ ಪೂರ್ವ ಭ್ರಷ್ಟಾಚಾರ ಎಂದು ಇದನ್ನು ಪರಿಗಣಿಸುವುದು ಕರ್ನಾಟಕದ ಸಾರ್ವಜನಿಕ ಸ್ವಾಸ್ಥ್ಯದ ದೃಷ್ಟಿಯಿಂದ ಅತ್ಯಗತ್ಯ. ತಾವು ತಕ್ಷಣ ಈಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಮತ್ತು ಭ್ರಷ್ಟಾಚಾರ ನಡೆದಿರುವುದು ಹೌದೆಂದಾದರೆ, ಆ ಬಗ್ಗೆ ತಕ್ಷಣ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಕರ್ನಾಟಕದ ಜನತೆಯ ಪರವಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ’ ಎಂದು ಅವರು ಬರೆದಿದ್ದಾರೆ.