ಸ್ನಾನ ಮಾಡದೇ ಇದ್ದ ಜಗತ್ತಿನ ಏಕೈಕ ವ್ಯಕ್ತಿ ನಿಧನ
ಇರಾನ್: ಸ್ನಾನ ಮಾಡಿದರೆ ರೋಗಬರುತ್ತದೆ ಎಂದು ಭಯಗೊಂಡು ಕಳೆದ 64 ವರ್ಷಗಳಿಂದ ಸ್ನಾನ ಮಾಡದೇ ಇದ್ದ ಇರಾನ್ ನಿವಾಸಿ ವಯೋವೃದ್ದರೋರ್ವರು ತನ್ನ 94ನೇ ವಯಸ್ಸಿನಲ್ಲಿ ನಿಧನರಾದರು.
ಇರಾನಿನ ದಕ್ಷಿಣ ಪ್ರಾಂತ್ಯದ ಪಾರ್ಸ್‌ನ ದೆಜ್ಗಾ ಗ್ರಾಮದ ನಿವಾಸಿಯಾದ ಅಮೌ ಹಾಜಿ ಎಂಬವರು ಕಳೆದ 64 ವರ್ಷಗಳಿಂದ ಸ್ನಾನ ಮಾಡಿರಲಿಲ್ಲ. ಸ್ನಾನ ಮಾಡಿದರೆ ಸಾಯುತ್ತೇನೆ ಎಂಬ ಭಯ (ಫೋಬಿಯಾ) ಅವರನ್ನು ಕಾಡಿತ್ತು. ಈ ಕಾರಣಕ್ಕೆ ಅವರು ಸ್ನಾನವೇ ಮಾಡುತ್ತಿರಲಿಲ್ಲ. ಈ ಕಾರಣಕ್ಕೆ ಅವರಿಗೆ ವಿಶ್ವದ ಅತ್ಯಂತ ಕೊಳಕು ಮನುಷ್ಯ ಎಂಬ ಹೆಸರನ್ನು ಪಡೆದುಕೊಂಡಿದ್ದರು.
64 ವರ್ಷಗಳ ಕಾಲ ಕೈ, ಮೈ , ಕಾಲನ್ನೂ ತೊಳೆಯದೆ ಅತ್ಯಂತ ಕೊಳಕು ವ್ಯಕ್ತಿಯಾಗಿದ್ದ ಈತನ ಮೈ ಮೇಲೆ ಮಣ್ಣಿನ ಮುದ್ದೆಯಾಕಾರದ ಜಿಡ್ಡುಗಳು ಅಂಟಿಕೊಂಡಿದ್ದವು. ಇವರು ನೀರು ಕುಡಿಯುವಾಗಲೂ ಮೈಗೆ ತಾಗದಂತೆ ಬಹಳ ಎಚ್ಚರಿಕೆಯಿಂದ ಇರುತ್ತಿದ್ದರು. ಮೈಗೆ ನೀರು ತಾಗಿದರೆ ಎಲ್ಲಿಯಾದರೂ ಸಾಯುತ್ತೇನೆ ಎಂಬ ಭಯ ಅವರಲ್ಲಿರುವುದೇ ಸ್ನಾನ ಮಾಡದೇ ಇರಲು ಕಾರಣ ಎನ್ನಲಾಗಿತ್ತು. ಜಗತ್ತಿನ ವಿವಿಧ ಮಾದ್ಯಮಗಳ ಇವರ ಬಗ್ಗೆ ವರದಿ ಬಿತ್ತರಿಸಿದ್ದವು. ಇವರನ್ನು ನೋಡಲೆಂದೇ ಹಲವಾರು ಮಂದಿ ಇರಾನಿಗೆ ಭೇಟಿ ನೀಡಿದ್ದರು. ಸ್ನಾನ ಮಾಡದೆ ಇದ್ದರೆ ಏನೂ ಆಗುವುದಿಲ್ಲವೇ ಎಂದು ಕೇಳಿದರೆ ಏನೂ ಅಗುವುದಿಲ್ಲ ಎಂದು ಹೇಳಿದ್ದರು.