ಕರಾವಳಿರಾಜಕೀಯ

ಕುಂಬ್ರ: ಕಟ್ಟಡ ಕಾರ್ಮಿಕರಿಗೆ ಬಸ್ ಪಾಸ್ ವಿತರಣಾ ಕಾರ್ಯಕ್ರಮ
ಕಾರ್ಮಿಕರ ಶ್ರೇಯೋಭಿವೃದ್ದಿಗೆ 15 ಸಾವಿರ ಕೋಟಿ ಮೀಸಲು: ಮಠಂದೂರು
ಪುತ್ತೂರು: ರಾಜ್ಯ ಮತ್ತು ಕೇಂದ್ರ ಸರಕಾರ ಕಾರ್ಮಿಕರ ಪರವಾಗಿಯೇ ಇದೆ. ಕಾರ್ಮಿಕರ ಸಂಕಷ್ಠಗಳಿಗೆ ಸದಾ ಸ್ಪಂದನೆಯನ್ನು ನೀಡುತ್ತಿದ್ದು ಕೊರೊನಾ ಕಾಲದಲ್ಲೂ ಅವರಿಗೆ ನೆರವು ನೀಡಲಾಗಿದೆ, ಬಸ್ ಪಾಸ್ ನೀಡಿ ಕಾರ್ಮಿಕರನ್ನು ಮೇಲಕ್ಕೆತ್ತುವ ಕಾರ್ಯವನ್ನು ಸರಕಾರ ಮಾಡುತ್ತಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.


ಅವರು ಕುಂಬ್ರ ನವೋದಯ ರೈತಸಭಾ ಭವನದಲ್ಲಿ ಕಟ್ಟಡ ಕಾರ್ಮಿಕರಿಗೆ ಬಸ್ ಪಾಸ್ ವಿತರಣೆ ಮಾಡಿ ಮಾತನಾಡಿದರು. ರಾಜ್ಯದಲ್ಲಿ ಒಟ್ಟು 1 ಲಕ್ಷ ಕಟ್ಟಡ ಕಾರ್ಮಿಕರಿಗೆ ಬಸ್ ಪಾಸ್ ವಿತರಣೆ ಮಾಡಲಾಗಿದೆ. ಕಾರ್ಮಿಕರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಅವರಿಗೆ ಸಂಚಾರ ವೆಚ್ಚವನ್ನು ಸರಕಾರವೇ ಭರಿಸುವ ಕಾರಣಕ್ಕೆ ಪಾಸ್ ವಿತರಣೆ ಮಾಡಲಾಗಿದೆ. 45 ಕಿ ಮೀ ಸರಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಬಹುದಾಗಿದ್ದು ಮೂರು ತಿಂಗಳಿಗೊಮ್ಮೆ ಪಾಸನ್ನು ರಿನೀವಲ್ ಮಾಡಬೇಕಾಗುತ್ತದೆ ಎಂದು ಹೇಳಿದರು.

ಪುತ್ತೂರು ತಾಲೂಕಿನಲ್ಲಿ 10 ಸಾವಿರಕ್ಕೂ ಮಿಕ್ಕಿ ಕಟ್ಟಡ ಕಾರ್ಮಿಕರ ನೋಂದವಣೆಯಗಿದ್ದು ಇದರಲ್ಲಿ 8 ಸಾವಿರ ಮಂದಿ ಸಕ್ರೀಯರಾಗಿದ್ದಾರೆ. ಮುಂದೆ ಕಟ್ಟಡ ಕಾರ್ಮಿಕರಿಗೆ ಪರಿಕರಗಳನ್ನು ವಿತರಣೆ ಮಾಡಲಾಗುವುದು ಎಂದು ಹೇಳಿದರು. ಕಾರ್ಮಿಕನನ್ನು ಮಾಲಿಕನನ್ನಾಗಿ ಮಾಡುವುದೇ ಸರಕಾರದ ಮುಖ್ಯ ಉದ್ದೇಶವಾಗಿದೆ ಎಂದು ಶಾಸಕರು ಹೇಳಿದರು. ದ ಕ ಜಿಲ್ಲೆಯಲ್ಲಿ ಕೊನೇ ಗಳಿಗೆಯಲ್ಲಿ ಬಸ್ ಪಾಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಕಾರಣಕ್ಕೆ ಕೆಲವೇ ಮಂದಿಗೆ ಪಾಸ್ ದೊರೆಯುವಂತಾಗಿದ್ದು ಸರಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ಕಾರ್ಮಿಕರು ಹೆಚ್ಚು ಮುತುವರ್ಜಿವಹಿಸಬೇಕು ಎಂದು ಹೇಳಿದರು.ಕಾರ್ಮಿಕರ ಶ್ರೇಯೋಭಿವೃದ್ದಿಗೆ ರಾಜ್ಯ ಸರಕಾರ 15 ಸಾವಿರ ಕೋಟಿ ರೂ ಕಾಯ್ದಿರಿಸಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಒಳಮೊಗ್ರು, ಕೆದಂಬಾಡಿ, ನೆಟ್ಟಣಿಗೆ ಮುಡ್ನೂರು, ಕೊಳ್ತಿಗೆ  ಮತ್ತು ಕೆದಂಬಾಡಿ ಗ್ರಾಮದ ಫಲಾನುಭವಿಗಳಿಗೆ ಬಸ್ ಪಾಸ್ ಶಾಸಕರು ವಿತರಿಸಿದರು. ಕಾರ್ಮಿಕರು ಎಲ್ಲಿಗೆ ಬೇಕಾದರೂ 45 ಕಿ ಮೀ ವ್ಯಾಪ್ತಿಯಲ್ಲಿ ಬಸ್ ಮೂಲಕ ಉಚಿತ ಪ್ರಯಣಿಸಿ ಕೆಲಸಕ್ಕೆ ತೆರಳಬಹುದಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ 1 ಲಕ್ಷ ಬಸ್ ಪಾಸ್ ವಿತರಣೆಗೆ ಕಾರ್ಮಿಕ ಸಚಿವರು ಒಪ್ಪಿಗೆ ಸೂಚಿಸಿದ್ದು ಕಾರ್ಮಿಕರು ಅರ್ಜಿ ಸಲ್ಲಿಸಿ ಕಾರ್ಡುಪಡೆದುಕೊಳ್ಳುವಂತೆ ಮನವಿ ಮಾಡಿದರು.


ವೇದಿಕೆಯಲ್ಲಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ, ಒಳಮೊಗ್ರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಬೂತ್ ಸಮಿತಿ ಅಧ್ಯಕ್ಷ ಮಾಧವ ರೈ ಕುಂಬ್ರ, ಕಟ್ಟಡ ಕಾರ್ಮಿಕ ಸಂಘ ರಾಜ್ಯ ಉಪಾಧ್ಯಕ್ಷ  ಪುರಂದರ ರೈ ಕುಂಬ್ರ , ಪೆರ್ಲಂಪಾಡಿ ಗ್ರಾಮ ಒನ್ ಕೇಂದ್ರದ ಪ್ರದೀಪ್, ಕುಂಬ್ರ ಗ್ರಾಮ ಒನ್ ಕೇಂದ್ರದ ಅನಿತಾ, ನೆಟ್ಟಣಿಗೆ ಮುಡ್ನೂರು ಗ್ರಾಮ ಒನ್ ಕೇಂದ್ರದ ವಿಠಲ ರೈ ಈಶ್ವರಮಂಗಲ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಬಿಜೆಪಿ ಗ್ರಾಮಾಂತರ ಮಂಡಲ ಪ್ರ. ಕಾರ್ಯದರ್ಶಿ ನಿತೀಶ್‌ಕುಮಾರ್ ಶಾಂತಿವನ ಸ್ವಾಗತಿಸಿ, ನೆಟ್ಟಣಿಗೆ ಮುಡ್ನೂರು ಗ್ರಾಮ ಒನ್ ಕೇಂದ್ರದ ಶಿವಕುಮಾರ್ ಈಶ್ವರಮಂಗಲ ವಂದಿಸಿದರು. ನಿಕಟಪೂರ್ವ ತಾಪಂ ಸದಸ್ಯ ಹರೀಶ್ ಬಿಜತ್ರೆ ಕಾರ್ಯಕ್ರಮ ನಿರೂಪಿಸಿದರು. ಪದ್ಮನಾಭ ಆಚಾರ್ಯ ಕುಂಬ್ರ ಪ್ರಾರ್ಥಿಸಿದರು.

Leave a Reply

Your email address will not be published. Required fields are marked *

error: Content is protected !!