ಕೊನೆಗೂ ಮೌನ ಮುರಿದ ಶಕುಂತಳಾ ಶೆಟ್ಟಿ
ಪುತ್ತೂರು: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ವಿವಾದಿತ ಪುರೋಹಿತರೋರ್ವರಿಂದ ಪೂಜೆ ಮಾಡಿಸಿದ ವಿಚಾರ ಗೊಂದಲಕ್ಕೆ ಕಾರಣವಾಗಿದಲ್ಲದೇ ಕಾರ್ಯಕರ್ತರ ಭಾರೀ ಆಕ್ರೋಶಕ್ಕೂ ಕಾರಣವಾಗಿತ್ತು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸ್ಪಷ್ಟನೆ ನೀಡಬೇಕೆಂದು ಆಗ್ರಹ ವ್ಯಕ್ತವಾಗಿತ್ತು. ಆದರೆ ಶಕುಂತಳಾ ಶೆಟ್ಟಿಯವರು ಕಾಂಗ್ರೆಸ್ ಸಭೆಗೂ ಬರದೇ ಸ್ಪಷ್ಟನೆಯನ್ನೂ ನೀಡದೆ ಮೌನಕ್ಕೆ ಶರಣಾಗಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ ವಿಶ್ವನಾಥ್ ರೈ ಅವರು ಕ್ಷಮೆ ಕೇಳಿದ್ದರೂ ಕಾರ್ಯಕರ್ತರಲ್ಲಿ ಅಸಮಾಧಾನ ಹಾಗೆಯೇ ಮುಂದುವರಿದಿತ್ತು.
ಇದೀಗ ಕೆಲವು ದಿನಗಳ ಬಳಿಕ ಶಕುಂತಳಾ ಶೆಟ್ಟಿಯವರು ವಿವಾದಿತ ಪುರೋಹತರೋರ್ವರಿಂದ ಪೂಜೆ ಮಾಡಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಮೊದಲ ಬಾರಿ ಮೌನ ಮುರಿದಿದ್ದಾರೆ.
ಅ.೨೧ರಂದು ಪುತ್ತೂರು ಬೈಪಾಸ್ ಅಶ್ಮಿ ಕಂಫರ್ಟ್ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಾವೇಶದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಕುಂತಳಾ ಶೆಟ್ಟಿಯವರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆಯುಧ ಪೂಜೆಯಲ್ಲಿ ಭಾಗವಹಿಸಿದ್ದು ಹೌದು, ಪ್ರಸಾದ ಸ್ವೀಕರಿಸಿದ್ದೂ ಹೌದು, ಆದರೆ ಪೂಜೆ ಮಾಡಿದವರನ್ನು ಕರೆಸಿದ್ದು ನಾನಲ್ಲ ಎಂದು ತಿಳಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧೀನದಲ್ಲಿರುವ ಪೂಜಾ ಸಮಿತಿಯವರು ಅವರನ್ನು ಕರೆಸಿದ್ದು ಪೂಜೆಗೆ ಯಾರು ಬರುತ್ತಾರೆಂದು ನನಗೆ ಗೊತ್ತೂ ಇರಲಿಲ್ಲ. ಈ ಹಿಂದೆ ಬ್ಲಾಕ್ ಕಚೇರಿಯಲ್ಲಿ ನಡೆದ ಆಯುಧ ಪೂಜೆಗೂ ಶ್ರೀ ಕೃಷ್ಣ ಉಪಾಧ್ಯಾಯರು ಬಂದಿದ್ದರು. ಇತ್ತೀಚೆಗೆ ಅವರು ಕೋಮು ಪ್ರಚೋದನಕಾರಿ ಭಾಷಣ ಮಾಡಿದ ವಿಚಾರ ಆ ಬಳಿಕವೇ ತಿಳಿಯಿತು ಎಂದು ಅವರು ತಿಳಿಸಿದರು. ನಾನು ಸಾಮಾಜಿಕ ಜಾಲತಾಣ ಉಪಯೋಗಿಸುವುದು ಕಮ್ಮಿ, ಅದರಲ್ಲಿ ಬಂದಿರುವ ಆರೋಪಗಳ ಬಗ್ಗೆ ಹೆಚ್ಚು ನನಗೆ ಗೊತ್ತಿಲ್ಲ, ನನ್ನನ್ನು ಗೊತ್ತಿರುವವರಿಗೆ ಅದೆಲ್ಲಾ ಗೊತ್ತಿದೆ ಎಂದು ಶಕುಂತಳಾ ಶೆಟ್ಟಿ ತಿಳಿಸಿದರು.
“ಪುರೋಹಿತ ವಿವಾದಿತ ವ್ಯಕ್ತಿಯೆಂದು ನನಗೆ ಗೊತ್ತಿರಲಿಲ್ಲ. ಗೊತ್ತಾದ ತಕ್ಷಣ ನಾನು ಪಕ್ಷದ ಪರವಾಗಿ ಕಾರ್ಯಕರ್ತರಲ್ಲಿ ಕ್ಷಮೆ ಕೇಳಿದ್ದೇನೆ. ಮುಂದೆ ಯಾವುದೇ ಕಾರ್ಯಕ್ರಮ ನಡೆಸುವಾಗಲೂ ಸಭೆ ಕರೆದು ಚರ್ಚಿಸಿಯೇ ಯಾವುದೇ ತೀರ್ಮಾನವನ್ನು ಕೈಗೊಳ್ಳುತ್ತೇವೆ” ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಸಭೆಗೆ ತಿಳಿಸಿದರು.