ಅಮಿತ್‌ಷಾ ಪುತ್ರನಿಗಾಗಿ ಜಿಲ್ಲೆಯ ಅಡಿಕೆ ಬೆಳೆಗಾರರ ಬಲಿಪಡೆದ ಮೋದಿ ಸರಕಾರ: ಹೇಮನಾಥ ಶೆಟ್ಟಿ ಆರೋಪ
ಪುತ್ತೂರು: ಭೂತಾನ್ ನಿಂದ 17 ಸಾವಿರ ಟನ್ ಅಡಿಕೆಯನ್ನು ಆಮದು ಮಾಡಿಕೊಳ್ಳುವ ಮೂಲಕ ಕೇಂದ್ರ ಸರಕಾರ ಕರಾವಳಿಯ ಅಡಿಕೆ ಬೆಳೆಗಾರರ ಹಿತಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ, ಕೇಂದ್ರ ಗೃಹ ಸಚಿವ ಅಮಿತ್‌ಷಾ ಪುತ್ರನಿಗಾಗಿ ಕರಾವಳಿ ಅಡಕೆ ಬೆಳೆಗಾರರನ್ನು ಬಲಿಪಡೆದುಕೊಳ್ಳುತ್ತಿದೆ ಎಂದು ಕೆ.ಪಿ.ಸಿ.ಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಆರೋಪಿಸಿದರು.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಡಿಕೆ ಬೆಲೆ 500 ರೂಪಾಯಿ ಗಡಿ ದಾಟಿದರೂ, ಉತ್ಪಾದನಾ ವೆಚ್ಚ ಇದಕ್ಕಿಂತಲೂ ಜಾಸ್ತಿಯಾಗಿದೆ. ಗೊಬ್ಬರ ಸೇರಿದಂತೆ ಎಲ್ಲಾ ಸಾಮಾಗ್ರಿಗಳ ಬೆಲೆಯೂ ಹೆಚ್ಚಾಗಿದ್ದು, ಅಡಿಕೆಗೆ ಇನ್ನಷ್ಟು ಬೆಲೆ ಏರಿಸುವ ಅಗತ್ಯವಿದೆ ಎಂದ ಅವರು ಉತ್ಪಾದನಾ ವೆಚ್ಚದಿಂದ ಕಂಗೆಟ್ಟಿರುವ ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಭೂತಾನ್ ಸೇರಿದಂತೆ ವಿದೇಶಗಳಿಂದ ಅಡಿಕೆಯನ್ನು ಆಮದು ಮಾಡಲು ಮುಂದಾಗಿದೆ.
ಇದರಿಂದಾಗಿ ಕರಾವಳಿಯಲ್ಲಿ ಬೆಳೆಯುವ ಅಡಿಕೆಯ ಬೆಲೆಯಲ್ಲಿ ಏರಿಳಿತವಾಗಲಿದೆ. ಗೃಹ ಸಚಿವ ಅಮಿತ್ ಶಾ ಮಗ ಜಯ್ ಶಾ ಆಡಳಿತದ ಕಂಪನಿ ಈ ರೀತಿಯ ಆಮದು ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದು, ಇದನ್ನು ಪ್ರಶ್ನಿಸುವ ತಾಕತ್ತೂ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಉಡುಪಿ-ಚಿಕ್ಕಮಗಳೂರು ಶೋಭಾ ಕರಂದ್ಲಾಜೆಯವರಿಗಿಲ್ಲ ಎಂದರು.
ಕೇಂದ್ರ ಸರಕಾರ ತಕ್ಷಣವೇ ಈ ಆಮದು ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಅಡಿಕೆ ದಾರಣೆ ಕುಸಿದರೆ ಜಿಲ್ಲೆಯ ಅಡಕೆ ಕೃಷಿಕರು ಬೀದಿ ಪಾಳಾಗುವುದು ನಿಶ್ಚಿತವಾಗಿದೆ. ಪ್ರತೀಯೊಂದು ವಸ್ತುಗಳ ಬೆಲೆ ಏರಿಕೆಯಿಂದ ದೇಶದಾದ್ಯಂತ ಜನ ಕಂಗೆಟ್ಟಿದ್ದಾರೆ. ಕರಾವಳಿಯಲ್ಲಿ ಅಡಕೆ ಕೃಷಿ ಇರುವ ಕಾರಣ ತಕ್ಕಮಟ್ಟಿಗೆ ಬದುಕು ಕಟ್ಟಿಕೊಂಡಿದ್ದಾರೆ. ಬಿಜೆಪಿ ಸರಕಾರ ಎಲ್ಲರನ್ನೂ ಬಡವರನ್ನಾಗಿಸುವ ಕೆಲಸಕ್ಕೆ ಮುಂದಾಗುತ್ತಿದೆ. ಯಾರದ್ದೋ ಹಿತಕ್ಕಾಗಿ ಜನತೆಯನ್ನು, ಕೃಷಿಕರನ್ನು ಬಲಿಕೊಡುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಆರ್ಯಾಪು ಸಹಕಾರಿ ಸಂಘದ ಉಪಾಧ್ಯಕ್ಷ ರಾದ ಸದಾನಂದ ಶೆಟ್ಟಿ ಕೂರೇಲು , ಪುರಸಭೆ ಮಾಜಿ ಉಪಾಧ್ಯಕ್ಷರಾದ ಲ್ಯಾನ್ಸಿ ಮಸ್ಕರೇನಸ್ , ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಪ್ರಸಾದ್ ಪಾಣಾಜೆ, ಬ್ಲಾಕ್ ಕಾಂಗ್ರೆಸ್ ಮಾಜಿ ಕಾರ್ಯದರ್ಶ ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.