ಬ್ರಹ್ಮರಕೂಟ್ಲು ಟೋಲ್ ಕಾರ್ಯಾಚರಣೆಗೆ ಅಡ್ಡಿ, ಉಪಕರಣಗಳಿಗೆ ಹಾನಿ ಯತ್ನ – ಪ್ರಕರಣ ದಾಖಲು
ಬಂಟ್ವಾಳ: ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ರಾಜಕೀಯ ಪಕ್ಷವೊಂದರ ಧ್ವಜ ಹಾಗೂ ಬ್ಯಾನರ್ಗಳನ್ನು ಹಿಡಿದು ಗುಂಪುಗೂಡಿದ ಕೆಲವರು ಟೋಲ್ ಕಾರ್ಯಾಚರಣೆಗೆ ಅಡ್ಡಿಪಡಿಸಿ, ಟೋಲ್ ಉಪಕರಣಗಳಿಗೆ ಹಾನಿ ಮಾಡಲು ಯತ್ನಿಸಿದ ಘಟನೆ ನ.26ರಂದು ನಡೆದಿದೆ.

ನ.26ರಂದು ಬೆಳಿಗ್ಗೆ ಸುಮಾರು 11.40ರ ವೇಳೆಗೆ ಯಾವುದೇ ಪೂರ್ವಾನುಮತಿ ಪಡೆಯದೆ ಕೆಲವರು ಟೋಲ್ ಪ್ಲಾಜಾದಲ್ಲಿ ಗುಂಪುಗೂಡಿ ಟೋಲ್ ಕಾರ್ಯಾಚರಣೆಗೆ ಅಡ್ಡಿಪಡಿಸಿರುವುದಲ್ಲದೆ, ಉಪಕರಣಗಳಿಗೆ ಹಾನಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ಯೋಜನಾ ನಿರ್ದೇಶಕರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 166/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 189(2), 191(2) ಹಾಗೂ 190ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



