ಕರಾವಳಿಕ್ರೈಂ

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ ಶಿಕ್ಷೆ ಪ್ರಕಟ



ಪುತ್ತೂರು: ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ ಹಾಗೂ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಒಟ್ಟು ₹50,000 ದಂಡ ವಿಧಿಸಿ ಮಂಗಳೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪುತ್ತೂರಿನಲ್ಲಿ ಕಾರ್ಯನಿರ್ವಹಣೆ) ಆದೇಶಿಸಿದೆ.


ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ ರವಿ ಅಲಿಯಾಸ್ ರವೀಂದ್ರ ಆಚಾರ್ಯ (32) ಎಂಬಾತನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಪ್ರಕರಣದ ತನಿಖೆ ನಡೆಸಿದ ಅಂದಿನ ಉಪ್ಪಿನಂಗಡಿ ಪೊಲೀಸ್ ವೃತ್ತ ನಿರೀಕ್ಷಕ ಡಿ. ಮಂಜುನಾಥ್ ಅವರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುಮಂಗಲ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಪೋಕ್ಸೋ ಕಾಯ್ದೆಯಡಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹25,000 ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದರೆ ಒಂದು ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.


ಅಲ್ಲದೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506ರ ಅಡಿಯಲ್ಲಿ ಒಂದು ವರ್ಷದ ಕಠಿಣ ಜೈಲು ಶಿಕ್ಷೆ ಹಾಗೂ ₹25,000 ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಮತ್ತೊಂದು ವರ್ಷದ ಕಠಿಣ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಎರಡೂ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಾಗುವಂತೆ ನ್ಯಾಯಾಲಯ ಆದೇಶಿಸಿದೆ.
ಸರ್ಕಾರಿ ಅಭಿಯೋಜಕ ಪುಷ್ಪರಾಜ್ ಅಡಂತ್ಯಾಯ ಅವರು ಸರ್ಕಾರದ ಪರವಾಗಿ ಸಮರ್ಥ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!