ಸಾರೆಪುಣಿ: ಅನುಮಾನಾಸ್ಪದವಾಗಿ ಮೃತಪಟ್ಟ ಮಹಿಳೆಯ ಮನೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಭೇಟಿ, ಕುಟುಂಬಕ್ಕೆ ಸಾಂತ್ವನ
ಪುತ್ತೂರು: ಕೆದಂಬಾಡಿ ಗ್ರಾಮದ ಸಾರೆಪುಣಿಯ ಮಹಿಳೆಯೋರ್ವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಅವರು ಮೃತರ ಮನೆಗೆ ಜು.22ರಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ಕಾಂಗ್ರೆಸ್ ಪಕ್ಷವು ಸದಾ ನಿಮ್ಮ ಜೊತೆ ಇರಲಿದೆ ಎಂದು ಅವರು ಹೇಳಿದರು.

ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಬೆಂಗಳೂರಿನಲ್ಲಿರುವ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ದೂರವಾಣಿ ಕರೆ ಮಾಡಿ ಘಟನೆಯ ಬಗ್ಗೆ ಸಮಗ್ರ ವಿವರ ನೀಡಿದರು. ಕೃಷ್ಣ ಪ್ರಸಾದ್ ಆಳ್ವ ಅವರಿಂದ ಮಾಹಿತಿ ಪಡೆಯುತ್ತಿದ್ದಂತೆಯೇ ಶಾಸಕ ಅಶೋಕ್ ಕುಮಾರ್ ರೈ ಅವರು ಮೃತ ಮಹಿಳೆಯ ತಾಯಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಾಂತ್ವನ ಹೇಳಿದರು. ಪ್ರಕರಣದ ಕುರಿತು ನಿಷ್ಪಕ್ಷಪಾತ ಹಾಗೂ ಸೂಕ್ತ ತನಿಖೆ ನಡೆಯಲಿದ್ದು ಕುಟುಂಬಕ್ಕೆ ಖಂಡಿತವಾಗಿಯೂ ನ್ಯಾಯ ಒದಗಿಸುವುದಾಗಿ ಶಾಸಕರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರ್, ಪ್ರ.ಕಾರ್ಯದರ್ಶಿ ನೌಶಾದ್ ತಿಂಗಳಾಡಿ, ಪ್ರಮುಖರಾದ ಹಬೀಬ್ ಕಣ್ಣೂರ, ಮೇಲ್ವಿನ್ ಮೊಂತೆರೋ, ಸ್ಥಳೀಯರಾದ ಅಶ್ರಫ್ ಸಾರೆಪುಣಿ, ಇಕ್ಬಾಲ್ ಸಾರೆಪುಣಿ ಉಪಸ್ಥಿತರಿದ್ದರು.




