ವಿವಾಹಿತ ಮಹಿಳೆಯ ಅನುಮಾನಾಸ್ಪದ ಸಾವಿನ ಪ್ರಕರಣ: ಸೂಕ್ತ ತನಿಖೆಗೆ ಅಶ್ರಫ್ ಸಾರೆಪುಣಿ ಆಗ್ರಹ
ಪುತ್ತೂರು: ಕುಂಬ್ರ ಸಾರೆಪುಣಿಯ ಫಾತಿಮತ್ ಇಶಾನ(22ವ)ಸುಳ್ಯ ತಾಲೂಕಿನ ಸಂಪಾಜೆ ಕಡೆಪಾಲದಲ್ಲಿ ಪತಿಯ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮೃತಳ ತಾಯಿ ಪೊಲೀಸ್ ದೂರು ನೀಡಿದ್ದಾರೆ. ಫಾತಿಮತ್ ಇಶಾನ ಅವರನ್ನು ನಾಲ್ಕು ವರ್ಷಗಳ ಹಿಂದೆ ಮದುವೆ ಮಾಡಿ ಕೊಟ್ಟಿದ್ದು ಇದೀಗ ಅವರ ಮರಣ ವಾರ್ತೆ ಕೇಳಿ ನಮಗೆಲ್ಲಾ ದಿಗ್ಭ್ರಮೆ ಆಗಿದೆ ಎಂದು ಸಾರೆಪುಣಿ ಜುಮಾ ಮಸೀದಿಯ ಅಧ್ಯಕ್ಷರು, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಅಶ್ರಫ್ ಸಾರೆಪುಣಿ ತಿಳಿಸಿದ್ದಾರೆ.

ಗಂಡನ ಮನೆಯವರ ಕಿರುಕುಳದಿಂದ ಘಟನೆ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಕುರಿತು ಸಮಗ್ರ ತನಿಖೆ ಆಗುವ ಮೂಲಕ ಸತ್ಯ ಹೊರಬರಬೇಕಿದೆ. ಪೊಲೀಸ್ ಇಲಾಖೆ ಸೂಕ್ತ ತನಿಖೆಯ ಮೂಲಕ ಮೃತ ಫಾತಿಮತ್ ನಿಶಾನ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ. ಇದೇ ವಿಚಾರವಾಗಿ ಸಾರೆಪುಣಿ ಜಮಾಅತ್ ವತಿಯಿಂದ ಜಿಲ್ಲಾ ಎಸ್.ಪಿ ಅವರನ್ನು ಭೇಟಿಯಾಗಲು ನಿರ್ಧರಿಸುವುದಾಗಿ ಅಶ್ರಫ್ ಸಾರೆಪುಣಿ ತಿಳಿಸಿದ್ದಾರೆ.




