ಕರಾವಳಿರಾಜ್ಯ

ಉಪ್ಪಿನಂಗಡಿ, ಕಬಕ, ಪುರುಷರಕಟ್ಟೆ, ಕೊಳ್ತಿಗೆ ಚತುಷ್ಪಥ ಯೋಜನೆಗೆ 25 ಕೋಟಿ ರೂ. ಬಿಡುಗಡೆ



ಪುತ್ತೂರು: ಪುತ್ತೂರು ತಾಲೂಕಿನ ಪ್ರಮುಖ ಪಟ್ಟಣಗಳು ಮತ್ತು ಪ್ರಮುಖ ರಸ್ತೆಗಳು ಹಾದು ಹೋಗುವ ಕೇಂದ್ರ ಸ್ಥಳಗಳ ಸೌಂದರ್ಯ ವೃದ್ಧಿ ಹಾಗೂ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಶಾಸಕ ಅಶೋಕ್ ರೈ ಅವರು 25 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಲೋಕೋಪಯೋಗಿ ಇಲಾಖೆ ಮೂಲಕ ಮಂಜೂರು ಮಾಡಿದ್ದಾರೆ.



ಈ ಮೊತ್ತದಲ್ಲಿ ಕ್ಷೇತ್ರದ ಪ್ರಮುಖ 4 ಕಡೆಗಳಲ್ಲಿ ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ. ಉಪ್ಪಿನಂಗಡಿ, ಪುರುಷರಕಟ್ಟೆ, ಕೊಳ್ತಿಗೆ ಮತ್ತು ಕಬಕ ಪಟ್ಟಣಗಳನ್ನು ಇದರಲ್ಲಿ ಸೇರಿಸಲಾಗಿದ್ದು, ಈ ಎಲ್ಲ ಪಟ್ಟಣಗಳು ಚತುಷ್ಪಥ ರಸ್ತೆ ಹೊಂದರಲಿದೆ.
ಉಪ್ಪಿನಂಗಡಿ ಪೇಟೆಯ ಮುಖ್ಯ ರಸ್ತೆಯನ್ನು ಪೂರ್ತಿ ಚತುಷ್ಪಥ ಮಾಡಲು ಉದ್ದೇಶಿಸಲಾಗಿದೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡು  ಉಪ್ಪಿನಂಗಡಿಯಲ್ಲಿ ಮೇಲ್‌ಸೇತುವೆ ಕೂಡ ನಿರ್ಮಾಣವಾಗಿದೆ. ಈ ಮೇಲ್ಸೇತುವೆಯ ಬುಡದಿಂದ ಆರಂಭಗೊಳ್ಳುವ ಉಪ್ಪಿನಂಗಡಿ ಪಟ್ಟಣದ ಮುಖ್ಯ ರಸ್ತೆಯನ್ನು ನೇತ್ರಾವತಿ ಸೇತುವೆಯವರೆಗೆ ಚತುಷ್ಪಥಗೊಳಿಸಲಾಗುತ್ತದೆ. ಇದರಿಂದ ಉಪ್ಪಿನಂಗಡಿ ಪೇಟೆಯ ಸೌಂದರ್ಯ ಇಮ್ಮಡಿಯಾಗಲಿದ್ದು, ಟ್ರಾಫಿಕ್ ಒತ್ತಡಕ್ಕೂ ಪರಿಹಾರ ಸಿಗಲಿದೆ. ಇದು ಉಪ್ಪಿನಂಗಡಿಯ ಅಭಿವೃದ್ಧಿಗೆ ಪ್ರಮುಖ ಕೊಡುಗೆ ನೀಡಲಿದೆ ಎನ್ನುತ್ತಾರೆ ಶಾಸಕ ಅಶೋಕ್ ರೈ.

 


ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ಮುಕ್ವೆಯಿಂದ ಪುರುಷರಕಟ್ಟೆಯವರೆಗೆ ಚತುಷ್ಪಥ ನಿರ್ಮಾಣವಾಗಲಿದೆ. ನಿಂತಿಕಲ್ಲು- ನೆಟ್ಟಾರ್- ಕೊಳ್ತಿಗೆ- ಅಮ್ಚಿನಡ್ಕ ರಾಜ್ಯ ಹೆದ್ದಾರಿಯಲ್ಲಿ ಕೊಳ್ತಿಗೆ ಪೇಟೆಯ ಮಧ್ಯೆ 100 ಮೀಟರ್ ಚತುಷ್ಪಥ ನಿರ್ಮಾಣವಾಗಲಿದೆ. ಪುತ್ತೂರು ಹೊರವಲಯದ ಕಬಕ ಜಂಕ್ಷನ್‌ನಿಂದ ಅಳಿಕೆಮಜಲುವರೆಗೆ ಚತುಷ್ಪಥ ನಿರ್ಮಾಣವಾಗಲಿದೆ.


ಹೋಬಳಿ ಮಟ್ಟದ ಪಟ್ಟಣಗಳು ಮತ್ತು ದೊಡ್ಡ ಗ್ರಾಪಂಗಳ ಕೇಂದ್ರಗಳು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು,  ಜನ ಸಾಂದ್ರತೆ, ವಾಹನ ಸಾಂದ್ರತೆ ಮತ್ತು ವಾಣಿಜ್ಯ ವ್ಯವಹಾರಗಳು ವೃದ್ಧಿಯಾಗುತ್ತಿವೆ.  ಇವುಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪೇಟೆ ಭಾಗದಲ್ಲಿ  ಚತುಷ್ಪಥ ಯೋಜನೆ ಜಾರಿಗೊಳಿಸುವುದು ಸರಕಾರದ ಉದ್ದೇಶ.  ಇದರಿಂದ ಪೇಟೆಯಲ್ಲಿ ವಾಹನ ದಟ್ಟಣೆ ನಿರ್ವಹಣೆಯಾಗುತ್ತದೆ. ಪೇಟೆಯ ಸೌಂದರ್ಯ ವೃದ್ಧಿಯಾಗುತ್ತದೆ. ವಾಣಿಜ್ಯ ವ್ಯವಹಾರಗಳು ವೃದ್ಧಿಯಾಗುತ್ತದೆ. ಅಭಿವೃದ್ಧಿಗೆ ವೇಗೋತ್ಕರ್ಷ ಸಿಗುತ್ತದೆ ಎನ್ನುತ್ತಾರೆ ಶಾಸಕರು.
ಉಪ್ಪಿನಂಗಡಿ, ಪುರುಷರಕಟ್ಟೆ, ಕೊಳ್ತಿಗೆ ಮತ್ತು ಕಬಕ ಈ ನಾಲ್ಕು ಕೇಂದ್ರಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಿಕೊಂಡು ಒಟ್ಟು 25 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ಯೋಜನೆ ಜಾರಿಗೊಳಿಸಲಾಗುವುದು. ಮುಂದಿನ ಹಂತದಲ್ಲಿ ಪುತ್ತೂರು ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಕೇಂದ್ರಗಳನ್ನು ಆರಿಸಿಕೊಂಡು ಪೇಟೆ ಭಾಗದಲ್ಲಿ ಚತುಷ್ಪಥ ನಿರ್ಮಿಸಲಾಗುತ್ತದೆ. ಇದಕ್ಕೂ ಹಂತ ಹಂತದಲ್ಲಿ ಅನುದಾನ ಬರಲಿದೆ ಎನ್ನುತ್ತಾರೆ ಶಾಸಕರು.



ಬಿಡುಗಡೆಯಾದ ಅನುದಾನಗಳು:
ಪುತ್ತೂರು- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಕೋಡಿಂಬಾಡಿಯಿಂದ ವಿನಾಯಕ ನಗರದವರೆಗೆ ಚತುಷ್ಪಥ  ಮತ್ತು ಉಪ್ಪಿನಂಗಡಿ ಪೇಟೆಯ ಮುಖ್ಯ ರಸ್ತೆಯ ಚತುಷ್ಪಥಕ್ಕೆ 5.5 ಕೋಟಿ ರೂಪಾಯಿ.
ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ಮುಕ್ವೆಯಿಂದ ಪುರುಷರಕಟ್ಟೆಯವರೆಗೆ ಚತುಷ್ಪಥ ನಿರ್ಮಿಸಲು 2 ಕೋಟಿ ರೂಪಾಯಿ.
ನಿಂತಿಕಲ್- ಅಮ್ಚಿನಡ್ಕ ರಾಜ್ಯ ಹೆದ್ದಾರಿಯಲ್ಲಿ ಕೊಳ್ತಿಗೆಯಿಂದ ಸಿದ್ದಮೂಲೆಯವರೆಗೆ ರಸ್ತೆ ಅಗಲೀಕರಣ ಮತ್ತು ಕೊಳ್ತಿಗೆ ಪೇಟೆ ಭಾಗದಲ್ಲಿ  100 ಮೀಟರ್ ಚತುಷ್ಪಥ ಯೋಜನೆಗೆ 7.5 ಕೋಟಿ  ರೂಪಾಯಿ.
ಪುತ್ತೂರು- ವಿಟ್ಲ ರಸ್ತೆಯಲ್ಲಿ ಕಬಕದಿಂದ ಅಳಿಕೆಮಜಲ್‌ವರೆಗೆ ಚತುಷ್ಪಥ ನಿರ್ಮಿಸಲು 10 ಕೋಟಿ ರೂಪಾಯಿ.

ಇನ್ನಷ್ಟು ಅನುದಾನ ಬರಲಿದೆ:
ಮುಂದಿನ 2 ವರ್ಷದಲ್ಲಿ ಪುತ್ತೂರಿಗೆ ಕೋಟಿ ಕೋಟಿ ಅನುದಾನ ಬರಲಿದೆ. ಲೋಕೋಪಯೋಗಿ ಇಲಾಖೆ ಮೂಲಕ ಇದೀಗ 25 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮುಂದಿನ ವಾರ  ಇನ್ನೊಂದು ಹಂತದ ಅನುದಾನ ಬರಲಿದೆ. ಜನರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸಗಳು ಆಗಬೇಕೆಂಬುದು ನನ್ನ ಕನಸು. ಮುಖ್ಯವಾಗಿ ಲೋಕೋಪಯೊಗಿ ರಸ್ತೆಗಳು ಅಭಿವೃದ್ಧಿಯಾಗಬೇಕು. ಉಪ್ಪಿನಂಗಡಿ ಪೇಟೆ, ಕೊಳ್ತಿಗೆ ಪೇಟೆ, ಕಬಕ ಪೇಟೆ ಮತ್ತು ಪುರುಷರಕಟ್ಟೆ ಪೇಟೆಗಳ ಸೌಂದರ್ಯ ಹೆಚ್ಚಾಗಲಿದೆ. ಜನದಟ್ಟಣೆ, ವಾಹನ ದಟ್ಟಣೆಗೂ ಪರಿಹಾರವಾಗಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!