ಸವಣೂರು ವಲಯ ಮಟ್ಟದ ಶಾಲಾ ದಾಖಲಾತಿ ಆಂದೋಲನಕ್ಕೆ ಚಾಲನೆ
ಪುತ್ತೂರು: ಸವಣೂರು ವಲಯ ಮಟ್ಟದ ದಾಖಲಾತಿ ಆಂದೋಲನ ಕಾರ್ಯಕ್ರಮ ಮೇ.18ರಂದು ನಡೆಯಿತು. ಮುಕ್ವೆ ಜಂಕ್ಷನ್ ಬಳಿ ಆಂದೋಲನವನ್ನು ಪ್ರಾರಂಭಿಸಿ ಬಳಿಕ ಹತ್ತಿರದ ಎಲ್ಲಾ ಮನೆಮನೆಗಳಿಗೆ, ಅಂಗಡಿಗಳಿಗೆ, ವಾಹನ ಸವಾರರಿಗೆ ಹಸ್ತ ಪ್ರತಿಗಳನ್ನು ವಿತರಿಸಿ ಅರಿವು ಮೂಡಿಸಲಾಯಿತು.

ಸ್ವಚ್ಛತಾ ವಾಹನದ ಮೂಲಕ ಆಂದೋಲನದ ಗೀತೆಯನ್ನು ಹಾಡಿಸುವ ಮೂಲಕ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ತಾಲೂಕು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಗೀತಾ, ರತ್ನಾಕುಮಾರಿ, ನಾಗೇಶ್ ಪಾಟಾಳಿ ಉಪಸ್ಥಿತರಿದ್ದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಜಯಂತ್ ವೈ ಮತ್ತು ಪರಮೇಶ್ವರಿ ಕಾರ್ಯಕ್ರಮದ ಉದ್ದೇಶ ಮತ್ತು ಘೋಷಣೆಗಳ ಬಗ್ಗೆ ವಿವರಿಸಿದರು.

ನರಿಮೊಗರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆಶಾ ಶುಭ ಹಾರೈಸಿ ಸ್ವಚ್ಚತಾ ವಾಹನದ ಹಾಡಿಗೆ ಚಾಲನೆ ನೀಡಿದರು. ಮುಕ್ವೆ ಸ.ಹಿ.ಪ್ರಾ.ಶಾಲೆಯ ಮುಖ್ಯ ಗುರು ಜೂಲಿಯಾನ ಮೊರಾಸ್ ಉಪಸ್ಥಿತರಿದ್ದರು. ಮುಕ್ವೆ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಅಬ್ದುಲ್ ಲತೀಫ್, ಅಂಗನವಾಡಿ ಕಾರ್ಯಕರ್ತೆಯರು, ಪೋಷಕರು, ಊರವರು, ಮಕ್ಕಳು ಭಾಗವಹಿಸಿದ್ದರು.




