ಕಡಬ: ವ್ಯಾಪಾರಕ್ಕೆ ಬಂದಿದ್ದ ಯುವತಿಯರ ಮೇಲೆ ಹಲ್ಲೆ, ಅಸಭ್ಯ ವರ್ತನೆ; ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು
ಕಡಬ: ವಸ್ತುಗಳ ಮಾರಾಟಕ್ಕಾಗಿ ಮನೆ ಮನೆಗೆ ತೆರಳುತ್ತಿದ್ದ ಯುವತಿಯರ ತಂಡದೊಂದಿಗೆ ಅಸಭ್ಯವಾಗಿ ವರ್ತಿಸಿ, ಹಲ್ಲೆ ನಡೆಸಿದ ಘಟನೆ ಕಡಬ ತಾಲೂಕಿನ ಬಲ್ಯ ದೇರಾಜೆ ಎಂಬಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ಮೂಲದ ಯುವತಿಯೊಬ್ಬರು ಖಾಸಗಿ ಸಂಸ್ಥೆಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏಪ್ರಿಲ್ 8ರಂದು ಮಧ್ಯಾಹ್ನ ತನ್ನ ಇಬ್ಬರು ಸಹೋದ್ಯೋಗಿ ಯುವತಿಯರೊಂದಿಗೆ ಕಡಬದ ಬಲ್ಯ ದೇರಾಜೆ ಪರಿಸರದಲ್ಲಿ ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಸ್ಥಳೀಯ ನಿವಾಸಿ ಆರೋಪಿಯು ಯುವತಿಯೊಂದಿಗೆ ಅತ್ಯಂತ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.
ಆರೋಪಿಯ ವರ್ತನೆಯನ್ನು ಪ್ರಶ್ನಿಸಲು ಬಂದ ಸಹೋದ್ಯೋಗಿ ಯುವತಿಯರಿಗೂ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು, ಅಸಭ್ಯವಾಗಿ ವರ್ತಿಸಿದ್ದಲ್ಲದೆ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಸಂತ್ರಸ್ತ ಯುವತಿಯು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.



