ಮನೆಯಿಂದ ಕಳವು ಪ್ರಕರಣ, ಇಬ್ಬರು ಆರೋಪಿಗಳ ಬಂಧನ
ಮಂಗಳೂರು, ಕುಳಾಯಿಯ ಮನೆಯೊಂದರಿಂದ ದೈವಗಳ ಮೂರ್ತಿಗಳು ಸೇರಿದಂತೆ ಹಲವು ಸೊತ್ತುಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಚೊಕ್ಕಬೆಟ್ಟು ನಿವಾಸಿ ವಾಜೀದ್ ಜೆ. ಯಾನೆ ವಾಜಿ (27) ಮತ್ತು ಜೋಕಟ್ಟೆಯ ಸಯ್ಯದ್ ಆಲಿ(40) ಬಂಧಿತ ಆರೋಪಿಗಳು.

ಕುಳಾಯಿ ಗ್ರಾಮದ ಯಶೋಧಾ ಕ್ಲಿನಿಕ್ ಬಳಿಯ ಮನೆಯಲ್ಲಿದ್ದ ದೈವಗಳ ಮೂರ್ತಿಗಳು ಹಾಗೂ ಅದಕ್ಕೆ ಸಂಬಂಧಪಟ್ಟ ಪೂಜಾ ಪರಿಕರಗಳು ಮತ್ತು ಟಿವಿ ಮತ್ತಿತರ ಸೊತ್ತುಗಳು 2025ರ ಡಿ.26ರಂದು ರಾತ್ರಿ ಕಳವಾಗಿತ್ತು.
ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾ ಸಹಾಯದಿಂದ ವಾಜೀದ್ ಎಂಬಾತನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆತ ಕಳವುಗೈದ ಹಿತ್ತಾಳೆ ಹಾಗೂ ತಾಮ್ರದ ಸಾಮಗ್ರಿಗಳನ್ನು ಜೋಕಟ್ಟೆಯ ಸಯ್ಯದ್ ಆಲಿ ಎಂಬಾತನಿಗೆ ಮಾರಾಟ ಮಾಡಿದ್ದಾಗಿ ಬಾಯಿಬಿಟ್ಟಿದ್ದಾನೆ. ಅದರ ಆಧಾರದಲ್ಲಿ ಸಯ್ಯದ್ ಅಲಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಆತನ ಮನೆಯಿಂದ ಸುಮಾರು 1,95,000 ರೂ. ಮೌಲ್ಯದ ಬೆಳ್ಳಿಯ ಆಭರಣಗಳು, 2,750 ರೂ. ಮೌಲ್ಯದ ಹಿತ್ತಾಳೆಯ ಪೂಜಾ ಸಾಮಾಗ್ರಿ, 300 ರೂ. ಮೌಲ್ಯದ ತಾಮ್ರದ ಪೂಜಾ ಸಾಮಾಗ್ರಿ, ಟಿ.ವಿ ಮತ್ತು ಸೆಟ್‌ಆಪ್ ಬಾಕ್ಸ್, ಆರೋಪಿಗಳ 2 ಮೊಬೈಲ್ ಹಾಗೂ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಸುಮಾರು 30,000 ರೂ. ಮೌಲ್ಯದ ಸ್ಕೂಟರ್ ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಜ.28ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ





