ಕರಾವಳಿ

ಆರ್ಲಪದವು ಕಿನ್ನಿ ಮಾಣಿ, ಪೂಮಾಣಿ ದೈವಗಳ ವಾರ್ಷಿಕ ಜಾತ್ರೋತ್ಸವ: ಇತಿಹಾಸದಲ್ಲೇ ಮೊದಲ ಬಾರಿಗೆ ಇಂದು ಕ್ಷೇತ್ರದಲ್ಲಿ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಅನ್ನದಾನ!

ಪುತ್ತೂರು: ಇತಿಹಾಸ ಪ್ರಸಿದ್ದವೂ,ಕಾರಣಿಕ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದ ಆರ್ಲಪದವು ಕಿನ್ನಿಮಾಣಿ,ಪೂಮಾಣಿ ಪಿಲಿಭೂತ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವದಲ್ಲಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಶಾಸಕ ಅಶೋಕ್ ರೈ ಅನ್ನದಾನ ವ್ಯವಸ್ಥೆಯಲ್ಲಿ ಕಲ್ಪಿಸಿದ್ದಾರೆ, ಕ್ಷೇತ್ರದ ಆಡಳಿತ ಮೊಕ್ತೇಸರರ ಸಲಹೆಯಂತೆ, ಸಾರ್ವಜನಿಕ‌ ಭಕ್ತಾದಿಗಳ ಸಹಕಾರದಿಂದ ಜಾತ್ರೋತ್ಸವದ ಕೊನೆಯ ದಿನವಾದ ಜ.28 ಕ್ಕೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ.


ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವ ಹಾಗೂ ನೇಮೋತ್ಸವ ಜ.26 ರಿಂದ 28 ರ ತನಕ ನಡೆಯಲಿದೆ. ಜ.28 ರಂದು ಪಿಲಿಭೂತ ನೇಮೋತ್ಸವ ಬೆಳಿಗ್ಗೆಯಿಂದ ರಾತ್ರಿ ತನಕ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಭಾಗವಹಿಸುತ್ತಾರೆ.
ದೈವಸ್ಥಾನದಲ್ಲಿ ದೈವಿಕ ಕಾರ್ಯ ಆರಂಭವಾಗಿ ನೂರಾರು ವರ್ಷಗಳೇ ಕಳೆದಿದೆ. ಅಂದಿನಿಂದ ಇಂದಿನ ತನಕ ದೈವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ನೇಮೋತ್ಸವದಂದು ಅನ್ನದಾನ ವ್ಯವಸ್ಥೆ ಇರಲಿಲ್ಲ. ಸಾವಿರಾರು ಮಂದಿ ಭಕ್ತಾದಿಗಳು ಭಾಗವಹಿಸುವ ಈ ನೇಮೋತ್ಸವಕ್ಕೆ ಬರುವ ಭಕ್ತಾದಿಗಳು ಊಟಕ್ಕೆ ಮನೆಗೆ ತೆರಳುತ್ತಿದ್ದರು. ಇದನ್ನು ಗಮನಿಸಿದ ಶಾಸಕ ಅಶೋಕ್ ರೈ ಅವರು ಆಡಳಿತ ಮೊಕ್ತೇಸರ ಶ್ರೀ ಕೃಷ್ಣ ಬೊಳಿಲ್ಲಾಯ ಅವರ ಮನವೊಲಿಸಿ ಅವರ ಸಹಕಾರದಿಂದ ಅನ್ನದಾನ ವ್ಯವಸ್ಥೆಯನ್ನು ಆರಂಭಿಸಿದ್ದಾರೆ. ಈ ಅನ್ನದಾನ ಕಾರ್ಯಕ್ರಮಕ್ಕೆ ಶಾಸಕರ ಜೊತೆ ಸ್ಥಳಿಯ ಪ್ರಮುಖರು ಕೈ ಜೋಡಿಸಿದ್ದಾರೆ. ಸಾರ್ವಜನಿಕರ ಸಹಕಾರದಿಂದ ಅನ್ನದಾನ ಕಾರ್ಯಕ್ರಮ ನಡೆಯಲಿದೆ.

ಈ ಸೇವೆಯಲ್ಲಿ ಶಾಸಕರ ಜೊತೆ ಸದಾಶಿವ ರೈ ಸೂರಂಬೈಲು, ಜಗನ್ಮೋಹನ್ ರೈ, ವಿಶ್ವನಾಥ ರೈ ಕಡಮಾಜೆ, ಬಾಬು ರೈ ಕೋಟೆ, ಶ್ರೀಪ್ರಸಾದ್ ಪಾಣಾಜೆ, ಶ್ರೀಹರಿ ಪಾಣಾಜೆ, ಚಂದ್ರ ಎ ಬಿ, ಪುಷ್ಪರಾಜ್ ರೈ ಕೋಟೆ, ಪುಷ್ಪರಾಜ್ ರೈ ಕೋಟೆ, ಲಕ್ಷ್ಮೀ ನಾರಾಯಣ ರೈ ಕೆದಂಬಾಡಿ, ರಾಮ‌ನಾಯ್ಕ್ ಕೋಟೆ, ಸದಾನಂದ ನಾಯ್ಕ ಭರಣ್ಯ, ಇವರೆಲ್ಲರ ಸಹಕಾರದಿಂದ ಅನ್ನದಾನ ಕಾರ್ಯಕ್ರಮ ನೆರವೇರಲಿದೆ.

ಆರ್ಲಪದವು ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವದಂದು ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ ಅವರಿಗೆ ಅನ್ನದಾನದ ವ್ಯವಸ್ಥೆ ಇರಲಿಲ್ಲ.‌ಈ ಬಾರಿ ಕ್ಷೇತ್ರದ ಇತಿಹಾಸದಲ್ಲೇ ಪ್ರಥಮ ಎಂಬಂತೆ ವಾರ್ಷಿಕ ಜಾತ್ರೆ ಹಾಗೂ ನೇಮೋತ್ಸವದಂದು ಸುಮಾರು‌ 15 ಸಾವಿರ ಮಂದಿಗೆ ಅನ್ನದಾನ ನಡೆಯಲಿದೆ. ಕ್ಷೇತ್ರದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೊಳಿಲ್ಲಾಯರು ಹಾಗೂ ಪಾಣಾಜೆಯ ಪ್ರಮುಖರ ಮತ್ತು ಭಕ್ತಾದಿಗಳ ಸಹಕಾರದಿಂದ ಅನ್ನದಾನ ಸೇವೆ ನೆರವೇರಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅನ್ನದಾನ ಪ್ರಸಾದ ಸ್ವೀಕರಿಸಬೇಕು ಎಂದು ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!