ಮಹೇಶ್ ಶೆಟ್ಟಿ ತಿಮರೋಡಿಗೆ ಗಡಿಪಾರು ಆದೇಶ
ಬೆಳ್ತಂಗಡಿ: ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತರು ಡಿ.17ರಂದು ಎರಡನೇ ಬಾರಿಗೆ ಆದೇಶ ಹೊರಡಿಸಿದ್ದಾರೆ.

ಮಹೇಶ್ ಶೆಟ್ಟಿಯನ್ನು ಈ ಹಿಂದೆ ಗಡಿಪಾರು ಮಾಡಿ ಪುತ್ತೂರು ಎ.ಸಿ.ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದರು. ಇದರ ವಿರುದ್ಧ ತಿಮರೋಡಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಗಡಿಪಾರು ಆದೇಶಕ್ಕೆ ತಡೆ ನೀಡಿದ್ದ ಹೈಕೋರ್ಟ್, ಮರು ಪರಿಶೀಲಿಸುವಂತೆ ಸೂಚಿಸಿತ್ತು. ಅದರಂತೆ ಆದೇಶವನ್ನು ಮರು ಪರಿಶೀಲಿಸಿ ತಿಮರೋಡಿಯವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ವಿ.ಸಿ. ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದಾರೆ.
ಗಡಿಪಾರು ಆದೇಶದ ಪ್ರತಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಉಜಿರೆಯ ಮಹೇಶ್ ಶೆಟ್ಟಿಯವರ ಮನೆಗೆ ಬೆಳ್ತಂಗಡಿ ಪೊಲೀಸರು ತೆರಳಿ ನೋಟಿಸ್ ಜಾರಿ ಮಾಡಲು ಮುಂದಾಗಿದ್ದು ಈ ವೇಳೆ ತಿಮರೋಡಿ ಮನೆಯಲ್ಲಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಸಂಜೆ ಮತ್ತೆ ತಿಮರೊಡಿಯ ಮನೆಗೆ ತೆರಳಿದ ಬೆಳ್ತಂಗಡಿ ಪೊಲೀಸರು ಗಡಿಪಾರು ಆದೇಶವನ್ನು ಮನೆಗೆ ಅಂಟಿಸಿ ತೆರಳಿದ್ದಾರೆ.
ತಿಮರೋಡಿ ವಿರುದ್ದ ಗಡಿಪಾರು ಆದೇಶ ಜಾರಿಯಾದ ಬೆನ್ನಲ್ಲೇ ಈ ಬಗ್ಗೆ ಪ್ರಕ್ರಿಯೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ತಿಮರೋಡಿಯ ಮನೆಗೆ ಗಡಿಪಾರು ನೋಟಿಸ್ ಅಂಟಿಸಿದ ಬಳಿಕ ಬೆಳ್ತಂಗಡಿ ಪೊಲೀಸರು ಉಜಿರೆ ಪೇಟೆಯಲ್ಲಿ ಗಡಿಪಾರು ಆದೇಶವನ್ನು ಮೈಕ್ ಮೂಲಕ ಪ್ರಕಟಿಸುವ ಕಾರ್ಯ ಮಾಡಿದ್ದಾರೆ.



