ಮುಂಬರುವ ಸ್ಥಳೀಯ ಚುನಾವಣೆಗೆ ಈಗಲೇ ಸಜ್ಜಾಗಿ: ಕಾರ್ಯಕರ್ತರಿಗೆ ಶಾಸಕ ಅಶೋಕ್ ರೈ ಕರೆ
ಪುತ್ತೂರು: ಮುಂಬರುವ ಸ್ಥಳೀಯ ಚುನಾವಣೆಗೆ ಈಗಲೇ ಸಜ್ಜಾಗಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬ್ಲಾಕ್ ಮಾಸಿಕ ಸಭೆ ಹಾಗೂ ವಲಯ ಅಧ್ಯಕ್ಷರುಗಳ ಸಭೆಯಲ್ಲಿ ಅವರು ಮಾತನಾಡಿದರು.

ಕಾರ್ಯಕರ್ತರು ಮುಂದೆ ನಡೆಯುವ ಸ್ಥಳೀಯ ಚುನಾವಣೆಗೆ ಈಗಿಂದಲೇ ಸಜ್ಜಾಗಬೇಕು. ನಗರಸಭೆ, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ಯಾವಾಗ ಬೇಕಾದರೂ ನಡೆಯಬಹುದು. ಪುತ್ತೂರಿನಲ್ಲಿ ನಡೆದ ಅಭಿವೃದ್ಧಿ ಕೆಲಸಗಳು, ರಾಜ್ಯ ಸರಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಿಳಿಸಿ ಅವರನ್ನು ಪಕ್ಷದ ಕಡೆ ಒಲವು ಬರುವಂತೆ ಮಾಡಬೇಕು, ಕಾಂಗ್ರೆಸ್ ಬಡವರ ಪಕ್ಷ, ಅಭಿವೃದ್ಧಿಯ ಪರ, ಶಾಂತಿ, ಸೌಹಾರ್ದತೆಯ ಪರ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಶಾಸಕರು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ದೊಡ್ಡ ಶಕ್ತಿ, ಈಗ ಎಲ್ಲೆಡೆ ಕಾಂಗ್ರೆಸ್ ಪರ ಅಲೆ ಇರುವ ಕಾರಣ ಸ್ಥಳೀಯ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಕಾರ್ಯಕರ್ತರು ಮಾಡಬೇಕು, ಅದಕ್ಕಾಗಿ ಈಗಲೇ ಸಜ್ಜಾಗಬೇಕು ಎಂದು ಶಾಸಕರು ಹೇಳಿದರು.





