ಮೂಡುಬಿದಿರೆ: ಕಾರ್ಮಿಕನ ಕೊಲೆ ಪ್ರಕರಣ, ಆರೋಪಿಗೆ ಜೀವಾವಧಿ ಶಿಕ್ಷೆ
ಮಂಗಳೂರು: ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಕಾಲೇಜೊಂದರ ಕ್ಯಾಂಟೀನ್ ಕೆಲಸಗಾರನನ್ನು ಐದು ವರ್ಷಗಳ ಹಿಂದೆ ಹತ್ಯೆಗೈದ ಪ್ರಕರಣದ ಆರೋಪಿಗೆ ನಗರದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಸಜೆ ವಿಧಿಸಿ ಆದೇಶಿಸಿದೆ.

ಮೃತ ಚೇತನ್ ಮತ್ತು ಆರೋಪಿ ಚಿದಾನಂದ ಕಾಲೇಜಿನ ಕ್ಯಾಂಟೀನ್ ನಲ್ಲಿ ಜೊತೆಯಾಗಿ ಕೆಲಸ ಮಾಡಿಕೊಂಡಿದ್ದು, ಕೆಲಸದ ವಿಚಾರದಲ್ಲಿ ಇವರ ನಡುವೆ ತಕರಾರು ಉಂಟಾಗಿತ್ತು. 2020ರ ಆ.30ರಂದು ರಾತ್ರಿ ಚಿದಾನಂದ ಕಬ್ಬಿಣದ ರಾಡ್‌ನಿಂದ ಚೇತನ್ ಮೇಲೆ ಹಲ್ಲೆ ನಡೆಸಿದ್ದನು. ಈ ವೇಳೆ ಅಲ್ಲೇ ಇದ್ದ ರಾಜೇಶ ಮತ್ತು ಶಂಕರ್ ಎಂಬವರು ಚೇತನ್‌ನ ರಕ್ಷಣೆಗೆ ಧಾವಿಸಿದ್ದರು. ಬಳಿಕ ಆರೋಪಿ ಚಿದಾನಂದ ಚೇತನ್ ಗೆ ಜೀವ ಬೆದರಿಕೆಯೊಡ್ಡಿ ಆತನ ಕೈಯಲ್ಲಿದ್ದ ಮೊಬೈಲ್ ಪೋನ್ ನ್ನು ಕಸಿದು ಪರಾರಿಯಾಗಿದ್ದ.
ಚೇತನ್ ಅವರನ್ನು ಚಿಕಿತ್ಸೆಗಾಗಿ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ಸಂಬಂಧ ರಾಜೇಶ್ ಪೂಜಾರಿ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ದಿನೇಶ್ ಕುಮಾರ್ ಮತ್ತು ತನಿಖಾ ಸಹಾಯಕ ಕಾಂತಪ್ಪ ಸುಮಾರು 40 ಸಾಕ್ಷಿದಾರರನ್ನು ವಿಚಾರಿಸಿ ಹಾಗೂ ಇತರ ಸಾಕ್ಷ್ಯಗಳನ್ನು ಸಂಗ್ರಹಿಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಜಗದೀಶ ಅವರು ಇದೀಗ ಶಿಕ್ಷೆ ಪ್ರಕಟಿಸಿದ್ದಾರೆ.



