ಕರಾವಳಿ

 ತ್ಯಾಜ್ಯ ಹಾಕಿದ ಎರಡು ಪ್ರತ್ಯೇಕ ಪ್ರಕರಣ: ಗ್ರಾಪಂನಿಂದ ದಂಡ

ಪುತ್ತೂರು: ಹೊಳೆಗೆ ಮತ್ತು ರಸ್ತೆ ಬದಿಗೆ ತ್ಯಾಜ್ಯ ಹಾಕಿದ ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಯ್ಯೂರು ಗ್ರಾಮ ಪಂಚಾಯತ್ ತ್ಯಾಜ್ಯ ಹಾಕಿದವರಿಗೆ ತಲಾ 2 ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಿದ ಘಟನೆ ವರದಿಯಾಗಿದೆ.

 ಗ್ರಾಪಂ ವ್ಯಾಪ್ತಿಯ ಮಾಡಾವು ಹೊಳೆಗೆ ಅ.8 ರಂದು ಸಂಜೆ ಕೋಳಿ ತ್ಯಾಜ್ಯ ಹಾಗೂ ಇತರ ಕಸಗಳನ್ನು ಹಾಕುತ್ತಿದ್ದ ಬೆಳ್ಳಾರೆ ಮೂಲದ ವ್ಯಕ್ತಿಯೋರ್ವನನ್ನು ಸಾರ್ವಜನಿಕರ ಮಾಹಿತಿಯಂತೆ ಹಿಡಿದ ಗ್ರಾಪಂ ಅಧಿಕಾರಿಗಳು ಆತನಿಗೆ 2 ಸಾವಿರ ರೂ. ದಂಡ ವಿಧಿಸಿ, ಆತ ಹಾಕಿದ ತ್ಯಾಜ್ಯವನ್ನು ಆತನಲ್ಲೇ ಹೆಕ್ಕಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

 ಅ.10 ರಂದು ಬೆಳಿಗ್ಗೆ ಮಾಡಾವು ಸಂತೋಷ್‌ನಗರದಲ್ಲಿ ರಸ್ತೆ ಬದಿಗೆ ಮೀನಿನ ತ್ಯಾಜ್ಯ ಹಾಗೂ ಕಸ ಹಾಕುತ್ತಿದ್ದ ಪುತ್ತೂರು ಕೂರ್ನಡ್ಕದ ವ್ಯಕ್ತಿಯೋರ್ವರನ್ನು ಸಾರ್ವಜನಿಕರ ಮಾಹಿತಿಯಂತೆ ಹಿಡಿದು ಆತನಿಗೂ 2 ಸಾವಿರ ರೂ. ದಂಡ ವಿಧಿಸಿ, ಆತ ಹಾಕಿದ ಕಸವನ್ನು ಆತನಲ್ಲೇ ಹೆಕ್ಕಿಸಿ ಎಚ್ಚರಿಕೆ ನೀಡಿ ಕಳುಹಿದ್ದಾರೆ. ಕಾರ್ಯಾಚರಣೆಯಲ್ಲಿ ಗ್ರಾಪಂ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಕೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಹಾಗೂ ಸದಸ್ಯರುಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಈ ಎರಡು ಪ್ರಕರಣಗಳಲ್ಲಿ ಸಂಬಂಧಿಸಿದಂತೆ ಸಾರ್ವಜನಿಕರು ಪಂಚಾಯತ್‌ಗೆ ಮಾಹಿತಿಯನ್ನು ನೀಡಿದ್ದರು. ಈ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಕಸ ಹಾಕುತ್ತಿದ್ದವರಿಗೆ ದಂಡನೆ ವಿಧಿಸಿದ್ದಾರೆ. ಆದ್ದರಿಂದ ಎಲ್ಲಾದರೂ ಸಾರ್ವಜನಿಕ ಸ್ಥಳಗಳಿಗೆ, ಹೊಳೆ, ನೀರಿನ ಮೂಲಕ್ಕೆ ತ್ಯಾಜ್ಯ,ಕಸ ಹಾಕುತ್ತಿರುವುದು ಕಂಡು ಬಂದರೆ ತಕ್ಷಣವೇ ಪಂಚಾಯತ್ ಅಧಿಕಾರಿಗಳಿಗೆ ಅಥವಾ ಸದಸ್ಯರುಗಳಿಗೆ ಮಾಹಿತಿ ನೀಡುವಂತೆ ಅಭಿವೃದ್ಧಿ ಅಧಿಕಾರಿ ನಮಿತಾ ಕೆ.ರವರು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆರಂಭದಲ್ಲಿ 2 ಸಾವಿರ ರೂ.ದಂಡ ವಿಧಿಸಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತೆ ಇಂತಹ ಕೃತ್ಯಗಳು ಕಂಡುಬಂದರೆ 5 ಸಾವಿರ ರೂ.ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!