ಕರಾವಳಿಕ್ರೈಂರಾಷ್ಟ್ರೀಯ

ಮಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ಸ್ಫೋಟಿಸುವುದಾಗಿ ಬೆದರಿಕೆ ಕರೆ: ಆರೋಪಿ ಅರೆಸ್ಟ್

ಮಂಗಳೂರು: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ಸ್ಪೋಟಿಸುವುದಾಗಿ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತಮಿಳುನಾಡು ರಾಜ್ಯದ ವೆಲ್ಲೂರು ಜಿಲ್ಲೆಯ ನಿವಾಸಿ ಶಶಿಕುಮಾ‌ರ್ ಎಂದು ಗುರುತಿಸಲಾಗಿದೆ. ಈತ  ಮಂಗಳೂರು ಸಹಿತ ಹಲವು ವಿಮಾನ ನಿಲ್ದಾಣಗಳಿಗೆ ಬೆದರಿಕೆ ಹಾಕಿರುವುದಾಗಿ ವಿಚಾರಣೆ ವೇಳೆ ಬಾಯ್ದಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಆ.29ರಂದು ಅನಾಮಿಕ ವ್ಯಕ್ತಿಯೋರ್ವ ಮಂಗಳೂರು ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಫೋನ್ ಕರೆ ಮಾಡಿ ಟರ್ಮಿನಲ್‌ ಬಿಲ್ಡಿಂಗ್‌ನ್ನು ಖಾಲಿ ಮಾಡಬೇಕು, ಇಲ್ಲವಾದರೆ ಟರ್ಮಿನಲ್ ಕಟ್ಟಡ ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಬಗ್ಗೆ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಡ್ಯೂಟಿ ಟರ್ಮಿನಲ್ ಮ್ಯಾನೇಜರ್ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ತಮಿಳುನಾಡಿನ ವೆಲ್ಲೂರ್ ಜಿಲ್ಲೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ದೇಶದ ಎಲ್ಲಾ ವಿಮಾನ ನಿಲ್ದಾಣಗಳ ಮೊಬೈಲ್ ನಂಬರ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸರ್ಚ್ ಮಾಡಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಶಶಿಕುಮಾರ್ ಅದೇ ರೀತಿ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಫೋನ್ ಮಾಡಿ ಟರ್ಮಿನಲ್ ಬಿಲ್ಡಿಂಗ್ ಸ್ಪೋಟಿಸುವುದಾಗಿ ಬೆದರಿಕೆ ಹಾಕಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!