ಕರಾವಳಿಕ್ರೈಂ

ಸುರತ್ಕಲ್: ಯುವಕನನ್ನು ಕೊಲೆಗೈದು ಮೃತದೇಹವನ್ನು ನೀರಿನ ಟ್ಯಾಂಕ್‌ಗೆ ಹಾಕಿದ ಆರೋಪಿಯ ಬಂಧನ



ಸುರತ್ಕಲ್: ಎರಡೂವರೆ ತಿಂಗಳ ಹಿಂದೆ ಸುರತ್ಕಲ್‌ನ ಖಾಸಗಿ ಲೇಔಟ್‌ವೊಂದರಲ್ಲಿ ಕೂಲಿ ಕಾರ್ಮಿಕ ಯುವಕನೋರ್ವನನ್ನು ಕೊಲೆಗೈದು ನೀರಿನ ಟ್ಯಾಂಕ್‌ಗೆ ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಸುರತ್ಕಲ್ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಪಶ್ಚಿಮ ಬಂಗಾಳ ನಿವಾಸಿ ಲಕ್ಷ್ಮಣ್ ಮಂಡಲ್ ಯಾನೆ ಲಖನ್ ಬಂಧಿತ ಆರೋಪಿ.

ಆರೋಪಿ ಲಕ್ಷ್ಮಣ್



ಪಶ್ಚಿಮ ಬಂಗಾಳದ ಮಾಲ್ಟಾ ಜಿಲ್ಲೆಯ ಪರಂಪುರ್ ರತುವಾ ನಿವಾಸಿ ಮುಖೇಶ್ ಮಂಡಲ್ (27) ಕೊಲೆಯಾದ ಯುವಕ.
ಸುರತ್ಕಲ್ ಗ್ರಾಮದ ಖಾಸಗಿ ಲೇಔಟ್‌ ವೊಂದರಲ್ಲಿ ಕೂಲಿ ನೌಕರನಾಗಿ ದುಡಿಯುತ್ತಿದ್ದ ಮುಖೇಶ್ ಮಂಡಲ್ ಜೂನ್ 24ರಂದು ನಾಪತ್ತೆಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸುರತ್ಕಲ್ ಪೊಲೀಸರು ಆಗಸ್ಟ್ 21ರಂದು ಎಸ್ಟೇಟ್‌ನ ನೀರಿನ ಟ್ಯಾಂಕ್ ವೊಂದರಲ್ಲಿ ಆತನ ಮೃತದೇಹವನ್ನು ಪತ್ತೆಹಚ್ಚಿದ್ದರು. ಮುಖೇಶ್ ಮಂಡಲ್‌ ರನ್ನು ಕೊಲೆಗೈದು ಟ್ಯಾಂಕ್‌ಗೆ ಎಸೆಯಲಾಗಿತ್ತೆನ್ನಲಾಗಿದೆ.



ತನಿಖೆ ಆರಂಭಿಸಿದ ಪೊಲೀಸರು ಮುಖೇಶ್ ಜೊತೆ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ನಿವಾಸಿಯಾಗಿರುವ ಲಕ್ಷ್ಮಣ್ ಮಂಡಲ್ ಯಾನೆ ಲಖನ್ನನ್ನು ಆತನ ಊರಿಗೆ ತೆರಳಿ ವಶಕ್ಕೆ ಪಡೆದು ಸುರತ್ಕಲ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯ ಬಯಲಾಗಿದೆ.

ತನ್ನ ಪತ್ನಿಯ ಅಶ್ಲೀಲ ಫೋಟೊಗಳ ನ್ನು ಸಂಗ್ರಹಿಸಿಟ್ಟಿದ್ದ ಕಾರಣಕ್ಕೆ ಮುಖೇಶ್ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ನೀರಿನ ಟ್ಯಾಂಕ್‌ಗೆ ಹಾಕಿ ಮರದ ಮುಚ್ಚಳ ಮುಚ್ಚಿರುವುದಾಗಿ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಸುರತ್ಕಲ್ ಪೊಲೀಸರು ಮುಖೇಶ್ ಮಂಡಲ್‌ನ ಕೊಲೆ ಪ್ರಕರಣ ದಾಖಲಿಸಿಕೊಂಡು ಲಕ್ಷ್ಮಣ್ ಮಂಡಲ್ ಯಾನೆ ಲಖನ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಳಿಕ 5 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



ಆರೋಪಿಯ ಪತ್ತೆ ಕಾರ್ಯದಲ್ಲಿ ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ. ಅವರ ನೇತೃತ್ವದಲ್ಲಿ ಪಿಎಸ್ ಐ ಗಳಾದ ರಘುನಾಯಕ್, ರಾಘವೇಂದ್ರ ನಾಯ್ಕ, ಜನಾರ್ದನ ನಾಯ್ಕ, ಶಶಿಧರ ಶೆಟ್ಟಿ, ಎಎಸ್ ಐ ಗಳಾದ ರಾಜೇಶ್ ಆಳ್ವ, ತಾರನಾಥ, ಹಾಗೂ ಸಿಬ್ಬಂದಿಯವರಾದ ಅಣ್ಣಪ್ಪ, ಉಮೇಶ್ ಕುಮಾರ್, ರಾಜೇಂದ್ರ ಪ್ರಸಾದ್, ಕಾರ್ತಿಕ್, ಮೋಹನ್ ಮತ್ತು ನಾಗರಾಜ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!