ಆಟೊ ಚಾಲಕನಿಗೆ ಹಲ್ಲೆ ಪ್ರಕರಣದಲ್ಲಿ ಸತ್ಯಾಂಶವಿಲ್ಲ: ಪೊಲೀಸ್ ಕಮಿಷನರ್
ಮಂಗಳೂರು: ನಗರದ ಫಳೀರ್‌ನಲ್ಲಿ ಆಟೊ ಚಾಲಕನಿಗೆ ರವಿವಾರ ರಾತ್ರಿ ತಂಡವೊಂದು ಹಲ್ಲೆ ನಡೆಸಿದ ಪ್ರಕರಣದಲ್ಲಿ ಸತ್ಯಾಂಶವಿಲ್ಲ. ಅದು ಚಾಲಕನೇ ಹೆಣೆದ ಕಟ್ಟು ಕಥೆ ಎಂಬ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಪೊಲೀಸರಿಗೆ ಮಾಹಿತಿ ನೀಡುತ್ತಾನೆ ಎಂದು ಆರೋಪಿಸಿ ಅಪರಿಚಿತ ತಂಡವೊಂದು ತನಗೆ ಹಲ್ಲೆ ನಡೆಸಿರುವುದಾಗಿ ರಿಕ್ಷಾ ಚಾಲಕ ಬಶೀರ್ ಎಂಬಾತ ಪೊಲೀಸರಿಗೆ ದೂರು ನೀಡಿದ್ದ. ಅದರಂತೆ ಪೊಲೀಸರು ತನಿಖೆ ಆರಂಭಿಸಿದ್ದರು.
ತನಿಖೆಯ ಬಳಿಕ ಅಂತಹ ಘಟನೆ ನಡೆದಿಲ್ಲ. ಚಾಲಕನೇ ಸಾರ್ವಜನಿಕರ ಗಮನ ಸೆಳೆಯಲು ಈ ಕೃತ್ಯ ನಡೆಸಿದ್ದಾನೆ. ರಿಕ್ಷಾ ಚಾಲಕ ಯಾವುದೋ ವಸ್ತು ಅಥವಾ ಪೆನ್ ನಿಂದ ತನ್ನ ದೇಹಕ್ಕೆ ಚುಚ್ಚಿಕೊಂಡು ಹಲ್ಲೆ ಪ್ರಕರಣ ಸೃಷ್ಟಿಸಿರುವುದಾಗಿ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.