ಅಕ್ರಮ ಮದ್ಯ ತಯಾರಿಸುತ್ತಿದ್ದ ಮನೆಗೆ ಪೊಲೀಸ್ ದಾಳಿ
ಮಂಗಳೂರು: ಪಜೀರು ಗ್ರಾಮದ ಕಂಬಳಪದವಿನ ಬಾಡಿಗೆ ಮನೆಯೊಂದರಲ್ಲಿ ಅಕ್ರಮ ಮದ್ಯ ತಯಾರಿ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮನೆಗೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾಸರಗೋಡು ನಿವಾಸಿ ಪ್ರಣವ್ ವಿ. ಶೆಣೈ(24) ಮತ್ತು ತಾಳಿಪಡ್ಡು ನಿವಾಸಿ ಅನುಷ್ ಆರ್. (24) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಕಂಬಳಪದವು ಬಳಿ ಬಾಡಿಗೆ ಮನೆಯಲ್ಲಿ ಇನ್ನಿಬ್ಬರ ಜೊತೆ ಸೇರಿಕೊಂಡು ಅಕ್ರಮವಾಗಿ ಮದ್ಯ ತಯಾರಿ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳನ್ನುಪೊಲೀಸರು ಮದ್ಯ ತಯಾರಿ ಮಾಡುತ್ತಿದ್ದ ಮನೆಗೆ ಕೊಂಡೊಯ್ದು ಮಹಜರು ನಡೆಸಿದ್ದು, ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದಾಗ ಸುಮಾರು 1,15,110 ರೂ. ಮೌಲ್ಯದ ಅಕ್ರಮ ಮದ್ಯ ತಯಾರಿಕೆಯ ಮೂರು ಮೆಷಿನ್ಗಳು, ಮಿಕ್ಸರ್ ಮೆಷಿನ್, ಅಕ್ರಮ ಮದ್ಯದ ಬಾಟ್ಲಿಗಳು, ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟ ಮಾಡುವ ಪರವಾನಿಗೆ ಇರುವ 8 ಮನನ್ ಹೌಝ್ ಎಂಬ ಹೆಸರಿನ ಮದ್ಯದ ಬಾಟ್ಲಿಗಳು, ಮದ್ಯ ತಯಾರಿಕೆಗೆ ಬೇಕಾದ ಇತರ ಸೊತ್ತುಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ



