ಕಳೆದುಕೊಂಡ ಹತ್ತು ಲಕ್ಷ ರೂ. ಮೌಲ್ಯದ ಚಿನ್ನವನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಹಿಂದಿರುಗಿಸಿದ ಮೂಡಬಿದರೆ ಪೊಲೀಸರು
ಮೂಡಬಿದರೆ: ಕಳೆದುಕೊಂಡ ಹತ್ತು ಲಕ್ಷ ಮೌಲ್ಯದ ಚಿನ್ನವನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಮೂಡಬಿದರೆ ಪೊಲೀಸರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಆ.8 ರಂದು ಪಡು ಮಾರ್ನಾಡು ಗ್ರಾಮದ ಧರ್ಮಪಾಲ ಬಲ್ಲಾಳರವರ ಪತ್ನಿ ವಿಜಯರವರು ಕುಪ್ಪೆಪದವಿನಲ್ಲಿ ಅವರ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಹಿಂತಿರುಗುವ ಸಂದರ್ಭ ಮಧ್ಯಾಹ್ನ 2:00 ಗಂಟೆಗೆ ಮೂಡಬಿದರೆ ಪೇಟೆಯಲ್ಲಿ ಎರಡು ಬಳೆ ಮತ್ತು ಚಿನ್ನದ ಸರ ಒಟ್ಟು ಒಂಬತ್ತು ಪವನ್ ಚಿನ್ನ ಮತ್ತು ಪರ್ಸ್ ಸಮೇತ ಕಳೆದುಕೊಂಡಿದ್ದರು. ಈ ಬಗ್ಗೆ ಅದೇ ದಿನ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಅನ್ವಯ ಪತ್ತೆ ಕಾರ್ಯದಲ್ಲಿ ಮೂಡಬಿದ್ರೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ ಜಿ ರವರ ನೇತೃತ್ವದಲ್ಲಿ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳಾದ ಮಹಮದ್ ಹುಸೇನ್, ಮಹಮದ್ ಇಕ್ಬಾಲ್, ಅಖಿಲ್ ಅಹಮದ್ ನಾಗರಾಜ ಲಮಾಣಿ ಮತ್ತು ವೆಂಕಟೇಶ್ ರವರು ಎರಡು ದಿನಗಳಲ್ಲಿ ಪತ್ತೆ ಹಚ್ಚಿ ಕಳೆದುಕೊಂಡ ಬಂಗಾರ ಮತ್ತು ಪರ್ಸ್ ನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಬಂಗಾರದ ಮೌಲ್ಯ ಸುಮಾರು 10 ಲಕ್ಷ ರೂ ಎಂದು ಅಂದಾಜಿಸಲಾಗಿದೆ. ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.