ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಮಸಾಜ್ ದಂಧೆ-ಆರೋಪ: ‘ಹಲ್ಲೆ, ಬೆತ್ತಲೆ ವೀಡಿಯೋ ಮಾಡಿ ಬೆದರಿಕೆ; ನೊಂದ ಮಹಿಳೆ ಕಣ್ಣೀರು
ಮಂಗಳೂರು: ನಗರದ ಬ್ಯೂಟಿ ಪಾರ್ಲರ್ ನ ಮಾಲಕಿ ತನ್ನ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ವೀಡಿಯೊ ಮಾಡಿ ಬೆದರಿಕೆ ಹಾಕಿರುವುದಾಗಿ ಸಂತ್ರಸ್ತ ಮಹಿಳೆಯೊಬ್ಬರು ಆರೋಪಿಸಿದ್ದು ಈ ಬಗ್ಗೆ ಪತ್ರಿಕಾಗೊಷ್ಟಿಯಲ್ಲಿ ಕಣ್ಣೀರು ಹಾಕುತ್ತಾ ನಡೆದ ಘಟನೆಯನ್ನು ವಿವರಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಆ.8ರಂದು ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿರುವ ಮಹಿಳೆ, ಕಳೆದ ಒಂದೂವರೆ ತಿಂಗಳ ಹಿಂದೆ ನಗರದ ಹಂಪನಕಟ್ಟೆ ಮತ್ತು ಜ್ಯೋತಿ ಸರ್ಕಲ್ ನಡುವಿನ ಯುನಿಸೆಕ್ಸ್ ಬ್ಯೂಟಿಪಾರ್ಲರ್ ನಲ್ಲಿ ಬ್ಯೂಟಿಶಿಯನ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದೆ, “ಬ್ಯೂಟಿಶಿಯನ್ ಕೋರ್ಸ್ ಮಾಡಿಕೊಂಡಿರುವ ತಾನು ಕೆಲಸಕ್ಕೆ ಸೇರುವ ಸಂದರ್ಭ ಆ ಬ್ಯೂಟಿಪಾರ್ಲ‌್ರನ ಮಾಲಕರು, ಬರುವ ಗ್ರಾಹಕರೊಂದಿಗೆ ಆತ್ಮೀಯವಾಗಿದ್ದುಕೊಂಡು ಅವರು ಬಯಸುವ ಸೇವೆಯನ್ನು ಒದಗಿಸುವಂತೆ ಮತ್ತು ಅವರಿಂದ 500 ರೂ.ನಿಂದ 1,000 ರೂ.ವರೆಗೆ ಸೇವಾಭತ್ತೆ ಪಡೆಯಲು ಹೇಳಿದ್ದರು. ಕಳೆದ ಸೋಮವಾರ ಪರಿಚಯದ ಪುರುಷ ಗ್ರಾಹಕರೊಬ್ಬರು ಬಂದು ಮಸಾಜ್ ಮಾಡಿಸಿಕೊಂಡ ಸಂದರ್ಭ ಮಾತನಾಡಿದ್ದನ್ನು ವಾಯ್ಸ್ ರೆಕಾರ್ಡ್ ಮಾಡಿ ಕೊಂಡು ಮಾಲಕರಿಗೆ ನೀಡಿದ್ದಾರೆ. ಆ ಸಂದರ್ಭ ಮಾಲಕಿ ಬಂದು ನನಗೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ನನ್ನ ಬೆತ್ತಲೆ ವೀಡಿಯೊ ಮಾಡಿ ಬೆದರಿಕೆಯೊಡ್ಡಿದರು. ಮರುದಿನ ನನ್ನ ಪತಿಯನ್ನು ಕರೆಸಿ ವೀಡಿಯೊ ತೋರಿಸಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಮೂರು ವರ್ಷದ ಮಗುವನ್ನೂ ಹೊಂದಿರುವ ನಾನು ಈ ಬಗ್ಗೆ ನೊಂದು ಆತ್ಮಹತ್ಯೆಗೂ ಮುಂದಾಗಿದ್ದೆ ಆ ಸಂದರ್ಭ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿಯವರನ್ನು ಸಂಪರ್ಕಿಸಿ ನಡೆದ ವಿಚಾರ ತಿಳಿಸಿದ್ದು, ಅವರು ನನಗೆ ಧೈರ್ಯ ನೀಡಿದ್ದಾರೆ ಎಂದ ಮಹಿಳೆ ಬಂದರು ಠಾಣೆಯಲ್ಲಿ ದೂರು ನೀಡಿದ್ದೇನೆ” ಎಂದು ಕಣ್ಣೀರು ಹಾಕುತ್ತಾ ಹೇಳಿದರು.





