ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಯು ಟಿ ತೌಸೀಫ್: ಕೆಪಿಸಿಸಿ ಅಧ್ಯಕ್ಷರ ಆದೇಶ
ಪುತ್ತೂರು: ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಮೊಹಮ್ಮದ್ ತೌಸೀಫ್ ಯು ಟಿ ಅವರನ್ನು ನೇಮಿಸಿ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಆದೇಶಿಸಿದ್ದಾರೆ. ತಕ್ಷಣದಿಂದ ಹುದ್ದೆಯನ್ನು ಅಲಂಕರಿಸಿ ಪಕ್ಷದ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ.

ಈ ಹಿಂದೆ ಪುತ್ತೂರು ಮತ್ತು ವಿಟ್ಲ ಉಪ್ಪಿನಂಗಡಿ ಎರಡು ಬ್ಲಾಕ್ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿತ್ತು. ಪಕ್ಷದ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಕಷ್ಡ ಸಾಧ್ಯ ಎಂದು ತೀರ್ಮಾನಕ್ಕೆ ಬಂದಿದ್ದ ಶಾಸಕರು ವಿಟ್ಲ ಉಪ್ಪಿನಂಗಡಿ ಬ್ಲಾಕನ್ನು ಎರಡು ಭಾಗ ಮಾಡಿ ಉಪ್ಪಿನಂಗಡಿಯಿಂದ ವಿಟ್ಲ ಬ್ಲಾಕನ್ನು ಪ್ರತ್ಯೇಕಿಸಿದ್ದರು. ಪುತ್ತೂರಿಗೆ ಕೃಷ್ಣಪ್ರಸಾದ್ ಆಳ್ವ ,ವಿಟ್ಲಕ್ಕೆ ಪದ್ಮನಾಭ ಫೂಜಾರಿ ಹಾಗೂ ಉಪ್ಪಿನಂಗಡಿಗೆ ಯು ಟಿ ತೌಸೀಫ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಅಧಿಕಾರ ಸ್ವೀಕಾರ ವೇಳೆ ಪುತ್ತೂರು ಮತ್ತು ವಿಟ್ಲ ಬ್ಲಾಕ್ ಅಧ್ಯಕ್ಷರಿಗೆ ಆದೇಶ ಪತ್ರವನ್ನು ನೀಡಲಾಗಿತ್ತು. ಉಪ್ಪಿನಂಗಡಿ ಬ್ಲಾಕ್ ಹೊಸ ಬ್ಲಾಕ್ ಆಗಿರುವ ಕಾರಣ ಕೆಪಿಸಿಸಿ ಆದೇಶ ಪತ್ರ ನೀಡಲು ಸ್ವಲ್ಪ ಸಮಯ ಬೇಕಿದೆ ಎಂದು ಶಾಸಕರು ತಿಳಿಸಿದ್ದರು. ಆ ಪ್ರಕಾರ ಇಂದು ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರ ಆಯ್ಕೆ ಕುರಿತಂತೆ ಕೆಪಿಸಿಸಿ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ.