ಐ.ಪಿ.ಎಲ್: ಪಾದಾರ್ಪಣಾ ಪಂದ್ಯದಲ್ಲೇ ಎಲ್ಲರ ಗಮನ ಸೆಳೆದ ಯುವ ಬೌಲರ್ ವಿಘ್ನೇಶ್ ಪುತ್ತೂರು!

18ನೇ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 155 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಚೆನ್ನೈ 19.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಕಲೆ ಹಾಕಿ ಗೆಲುವಿನ ನಗೆ ಬೀರಿತು. ಈ ವೇಳೆ ಮುಂಬೈ ತಂಡದ ಯುವ ಬೌಲರ್ ಎಲ್ಲರ ಗಮನ ಸೆಳೆದರು. 23 ವರ್ಷದ ವಿಘ್ನೇಶ್ ಪುತ್ತೂರು ತಮ್ಮ ಬಿಗು ದಾಳಿಯಿಂದ ಎದುರಾಳಿಗೆ ನಡುಕ ಹುಟ್ಟಿಸಿದ್ದರು.

ಯುವ ಬೌಲರ್ ವಿಘ್ನೇಶ್ ಪುತ್ತೂರು ಮೊದಲು ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಅವರ ವಿಕೆಟ್ ಪಡೆದರು. ಅರ್ಧಶತಕ ಬಾರಿಸಿ ಮುನ್ನುಗುತ್ತಿದ್ದ ರುತುರಾಜ್‌ಗೆ ವಿಘ್ನೇಶ್ ರನ್ನು ಔಟ್ ಮಾಡಿದ ಅವರು ಮುಂದಿನ ಓವರ್‌ನಲ್ಲಿ ಶಿವಂ ದುಬೆ ವಿಕೆಟ್ ಕಬಳಿಸಿದರು. ನಂತರದ ಓವರಿನಲ್ಲಿ ಮಧ್ಯಮ ಕ್ರಮಾಂಕದ ಇನ್ನೋರ್ವ ಆಟಗಾರ ದೀಪಕ್ ಹೂಡಾ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದ್ರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಾಣಿಸಿಕೊಂಡ ವಿಘ್ನೇಶ್ ಮಿಂಚಿದರು. ಕೇರಳದ ವಿಘ್ನೇಶ್ ಪುತ್ತೂರು ಬಲಗೈ ಬ್ಯಾಟರ್ ಹಾಗೂ ಎಡಗೈ ಸ್ಪಿನ್ ಬೌಲರ್. ಇವರು ಕೇರಳ ಪರ ಹಲವು ವಯೋಮಿತ ತಂಡಗಳಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ. ಆದರೆ ಇನ್ನು ಕೇರಳ ರಾಜ್ಯದ ಪರ ಆಡುವ ಅವಕಾಶ ಪಡೆದಿಲ್ಲ. ಭಾನುವಾರ ತಮ್ಮ ವೃತ್ತಿ ಜೀವನದ ಮೊದಲ ಟಿ20 ಪಂದ್ಯವನ್ನು ಇವರು ಆಡಿದ್ದಾರೆ. ಇವರನ್ನು ಮುಂಬೈ ಇಂಡಿಯನ್ಸ್ ಹರಾಜಿನಲ್ಲಿ ರೂ. 30 ಲಕ್ಷಕ್ಕೆ ಖರೀದಿ ಮಾಡಿತ್ತು.
ಆರ್ಥಿಕ ಸವಾಲುಗಳನ್ನು ಹೊಂದಿರುವ ಕುಟುಂಬದಲ್ಲಿ ಜನಿಸಿದ ವಿಘ್ನೇಶ್ ಕ್ರೀಡೆಯ ಮೇಲೆ ತನ್ನ ಪ್ರೀತಿಯನ್ನು ಕಡಿಮೆ ಮಾಡಿಕೊಳ್ಳಲಿಲ್ಲ. ಇದಕ್ಕೆ ತಂದೆ ತಾಯಿ ಕೊಡುಗೆ ಸಹ ಅಪಾರ. ತಂದೆ ಆಟೋ ಚಾಲಕರಾಗಿದ್ದರೆ, ತಾಯಿ ಗೃಹಿಣಿ.